ಸೆ.20ರಂದು ರಾಜ್ಯಾದ್ಯಂತ “ಪಯಣ್ʼ ಕೊಂಕಣಿ ಚಲನಚಿತ್ರ ತೆರೆಗೆ
ಮಂಗಳೂರು: ʻಸಂಗೀತ್ ಘರ್, ಮಂಗಳೂರುʼ ಬ್ಯಾನರ್ನಡಿಯಲ್ಲಿ ತಯಾರಾಗಿರುವ ಬಹು ನಿರೀಕ್ಷಿತ ಕೊಂಕಣಿ ಚಲನಚಿತ್ರ ʻಪಯಣ್ʼ (ಪ್ರಯಾಣ) ಸೆ. 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಮುಹೂರ್ತದಿಂದಲೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟೀಜರ್ ಬಿಡುಗಡೆಯಾದದ್ದೇ ಕೊಂಕಣಿ ಚಲನಚಿತ್ರ ಪ್ರೇಮಿಗಳಿಂದ ಪ್ರಸಂಶೆಯ ಸುರಿಮಳೆ ಹರಿದು ಬಂದಿತ್ತು. ಚಲನಚಿತ್ರದ ಟ್ರೇಲರ್‌ಗೂ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರಕಿತ್ತು. ಈಗಾಗಲೇ ಮಂಗಳೂರು ಮತ್ತು ಪುತ್ತೂರಿನಲ್ಲಿ ಪ್ರೀಮಿಯರ್ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ ಮತ್ತು ವೀಕ್ಷಕರಿಂದ ಕೊಂಕಣಿ ಚಲನಚಿತ್ರದ ಇತಿಹಾಸದಲ್ಲಿ ʻಪಯಣ್ʼ ಒಂದು ಮೈಲಿಗಲ್ಲು ಎಂದು ಪ್ರಶಂಸೆಗೊಳಪಟ್ಟಿದೆ.
ಶ್ರೀಮತಿ ನೀಟಾ ಜೊನ್ ಪೆರಿಸ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಪಯಣ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್ ಪಿರೇರಾ ಬರೆದಿದ್ದು, ಸಾಹಿತ್ಯ ಮೆಲ್ವಿನ್ ಪೆರಿಸ್, ಸಂಗೀತ ನಿರ್ದೇಶನ ರೋಶನ್ ಡಿʼಸೋಜಾ ಆಂಜೆಲೊರ್.
ಪುತ್ತೂರಿನ ಯುವ ಪ್ರತಿಭೆ ಬ್ರಾಯನ್ ಸಿಕ್ವೇರಾ ನಾಯಕನಾಗಿ ಹಾಗೂ ಜಾಸ್ಮಿನ್ ಡಿʼಸೋಜಾ, ಕೇಟ್ ಪಿರೇರಾ ಮತ್ತು ಶೈನಾ ಡಿʼಸೋಜ, ನಾಯಕಿಯರಾಗಿ ನಟಿಸಿದ್ದಾರೆ. ನಟರಾದ ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ, ಮೆಲಿಶಾ ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಛಾಯಾಗ್ರಹಣ ವಿ. ರಾಮಾಂಜನೆಯ ಮತ್ತು ಸಂಕಲನ ಮೆವಿನ್ ಜೊಯೆಲ್ ಪಿಂಟೊ, ಶಿರ್ತಾಡಿ ಇವರದ್ದು.
ಮಂಗಳೂರು, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪಯಣ್ ಚಿತ್ರೀಕರಣ ನಡೆಸಲಾಗಿದೆ.
ಸೆ. 20ರಂದು ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಕುಂದಾಪುರ ಹಾಗೂ ಪುತ್ತೂರಿನಲ್ಲಿ ಏಕಕಾಲದಲ್ಲಿ ಪಯಣ್ ಬಿಡುಗಡೆಯಾಗಲಿದೆ. ಈಗಾಗಲೇ ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗುವ ದಿನಾಂಕಗಳು ನಿಗದಿಯಾಗಿವೆ.
ಪಯಣ್... ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಕಂಡುಹಿಡಿಯುವ ಸಂಗೀತಗಾರನ ಹೋರಾಟದ ಪ್ರಯಾಣ ಕಥೆ. ಅವರು ಸಂಗೀತ ಉದ್ಯಮದ ಸವಾಲುಗಳನ್ನು ಎದುರಿಸಿ ಮುನ್ನಡೆಯುವಾಗ - ವೈಯಕ್ತಿಕ ಪೈಶಾಚಿಕತೆಯನ್ನು ಎದುರಿಸುವುದರೊಂದಿಗೆ ವಂಚನೆ ಮತ್ತು ಅನಿರೀಕ್ಷಿತ ಜಾಲಗಳನ್ನು ಎದುರಿಸುತ್ತಾರೆ. ಸಂಗೀತ ಕ್ಷೇತ್ರದಲ್ಲಿ ಪಡಿಯಚ್ಚನ್ನು ಒತ್ತಿ, ತನ್ನ ಹಿಂದೆ ಪರಂಪರೆಯೊಂದನ್ನು ಬಿಟ್ಟು ಹೋಗುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟ ಅವರು ತನ್ನ ಸಂಗೀತ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರಬಿಂದುವಾಗಿಸಿದ ಕಥೆಯೇ ಪಯಣ್.