ಮಾತೃಭಾಷೆ ಸಂಬಂಧ ಬೆಸೆಯುವ ಕೊಂಡಿಯಾಗಬೇಕು: ವಂ. ಪಾವ್ಲ್ ಸಿಕ್ವೇರಾ
ಕಿನ್ನಿಗೋಳಿ: ಇಲ್ಲಿನ ಬಳಕುಂಜೆಯ ಸಂತ ಪಾವ್ಲರ ದೇವಾಲಯ ದಲ್ಲಿ ರವಿವಾರ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಂ.ಪಾವ್ಲ್ ಸಿಕ್ವೇರಾ ಅವರು, ನಾವು ಎಲ್ಲಿದ್ದರೂ ಮಾತೃ ಭಾಷೆಯನ್ನು ಪ್ರೀತಿಸಬೇಕು. ಮಾತೃ ಭಾಷೆ ಸಂಬಂಧ ಬೆಸೆಯುವ ಕೊಂಡಿಯಾಗಬೇಕು ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರೋಬರ್ಟ್ ಮಿನೇಜಸ್ ಅವರು ಮಾತನಾಡಿ, ಕೊಂಕಣಿ ಭಾಷೆಯ ಉಗಮ ಚರಿತ್ರೆ, ಮಹತ್ವ ಹಾಗೂ ಇದರ ಉಳಿವಿಗಾಗಿ ಕೊಂಕಣಿ ಮಾತನಾಡುವ ಸಮುದಾಯದ ಕರ್ತವ್ಯವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕೊಂಕಣಿ ಭಕ್ತಿಗೀತೆಗಳನ್ನು ಬರೆಯುವ ಬಳಕುಂಜೆಯ ಸಂತ ಪಾವ್ಲರ ದೇವಾಲಯ ಧರ್ಮಗುರು ವಂ.ಪಾವ್ಲ್ ಸಿಕ್ವೇರಾ, ಕೊಂಕಣಿ ವೊವಿಯೊ ಹಾಡುವ ರೀಟಾ ಡಿಸೋಜಾ, ಕಾಲೇಜಿನಲ್ಲಿ ಕೊಂಕಣಿ ಪಾಠ ಭೋಧನೆ ಹಾಗೂ ವಿವಿಧ ಹಾಸ್ಯ ಕಲಾವಿದೆ ಡಾ. ಫ್ರೀಡಾ ರೊಡ್ರೀಗಸ್, ಕೊಂಕಣಿ ಲೇಖಕಿ ಲವೀನಾ ಸೆರಾವೊ ಅವರನ್ನು ಸನ್ಮಾನಿಸಲಾಯಿತು.
ಪ್ರಾನ್ಸಿಸ್ ಮಿನೇಜಸ್ ಕೊಂಕಣಿ ಮಾನ್ಯತಾ ದಿನದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ಥಳೀಯ ಕಾನ್ವೆಂಟ್ ನ ಭಗಿನಿ ಫೆಲ್ಸಿನ್, ಯುವ ಆಯೋಗ ಕಾರ್ಯದರ್ಶಿ ರೇಶಲ್ ರೊಡ್ರೀಗಸ್, ಶಾಂತಿ ಮತ್ತು ನೀತಿ ಆಯೋಗದ ಸದಸ್ಯೆ ನಿರ್ಮಲಾ ರೊಡ್ರೀಗಸ್, ಸಾಮಾಜಿಕ ಏಳಿಗೆ ಆಯೋಗದ ಸದಸ್ಯೆ ಅನಿತಾ ಡಿಸೋಜಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೆನಿಶಾ ರೊಡ್ರೀಗಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಿಗೆ ವಿವಿಧ ಮನೋರಂಜನಾ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ಕೊನೆಗೆ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಭೋಜನವನ್ನು ಏರ್ಪಡಿಸಲಾಗಿತ್ತು.