ರಸ್ತೆ, ಕಾಲು ದಾರಿ ಒದಗಿಸದ ಕೋಟೆಕಾರ್ ಪಟ್ಟಣ ಪಂಚಾಯತ್: ಕೌನ್ಸಿಲರ್ ಹರೀಶ್ ಆರೋಪ
ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ನನ್ನ ವಾರ್ಡ್ ನ ನಡಾರ್ ಸಾಯಿ ನಗರದಲ್ಲಿ 15 ಕ್ಕೂ ಹೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು,ಈ ಪ್ರದೇಶಕ್ಕೆ ಸರಿಯಾದ ರಸ್ತೆ, ಕಾಲುದಾರಿ, ಕುಡಿಯುವ ನೀರು ಒದಗಿಸದೇ ಅನ್ಯಾಯ ಎಸಗಿದೆ. ಇದರಿಂದ ಈ ಕುಟುಂಬಗಳು ದಾರಿ ಇಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕೋಟೆಕಾರ್ ಪಟ್ಟಣ ಪಂಚಾಯತ್ 11 ನೇ ವಾರ್ಡ್ ಕೌನ್ಸಿಲರ್ ಹರೀಶ್ ಆರೋಪಿಸಿದ್ದಾರೆ.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆಕಾರ್ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದು ಈ ತಿಂಗಳ 27 ಕ್ಕೆ ಎರಡು ವರ್ಷ ಪೂರ್ತಿ ಆಗುತ್ತದೆ. ಆದರೂ ಈ ಪಂಚಾಯತ್ ಆಡಳಿತಾಧಿಕಾರಿಗಳ ಕೈಯಲ್ಲಿ ಇದೆ. ಕೌನ್ಸಿಲರ್ ಗಳಾದ ನಾವು ಯಾವುದೇ ಬೇಡಿಕೆ ಇಟ್ಟರೂ ಅಭಿವೃದ್ಧಿ ಕಾಮಗಾರಿ ಗೆ ಸ್ಪಂದಿಸುತ್ತಿಲ್ಲ ಎಂದರು.
ಮಡ್ಯಾರ್ ಸಾಯಿನಗರ ಪ್ರದೇಶ ಕ್ಕೆ ರಸ್ತೆ ಮಾಡಿ ಎಂದರೆ ಜಾಗವಿಲ್ಲ ಎನ್ನುತ್ತಾರೆ. ಈ ಪ್ರದೇಶದ ಹತ್ತಿರವೇ ಸರಕಾರಿ ಜಾಗವಿದೆ. ಈ ಜಾಗದಲ್ಲಿ ರಸ್ತೆ ಮಾಡಬಹುದು. ಏನಿಲ್ಲದಿದ್ದರೂ ಕಾಲುದಾರಿ ಒದಗಿಸಬಹುದು. ಆದರೂ ಕೂಡ ಮಾಡಿ ಕೊಡುತ್ತಿಲ್ಲ.ಈ ಬಗ್ಗೆ ಸಾರ್ವಜನಿಕರು ಮನವಿ ಮಾಡಿದರೂ ಪಂಚಾಯತ್ ಬೇರೆ ಸಬೂಬು ಹೇಳಿ ಅಲೆದಾಡಿಸುತ್ತಿದ್ದಾರೆ. ರಸ್ತೆ ಇಲ್ಲದಿದ್ದರೂ ಕಾಲು ದಾರಿ ಮಾಡಿಕೊಡಬೇಕಾಗಿದೆ. ಈ ಒಂದು ಕೆಲಸಕ್ಕಾಗಿ, ಅಲೆದಾಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನೀರು, ಕಾಲುದಾರಿ ಇಲ್ಲದೇ ಬೀದಿಗೆ ಬಿದ್ದಿರುವ ಕುಟುಂಬ ಗಳಿಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಯಿನಗರ ಪ್ರದೇಶದ ನಿವಾಸಿಗಳು ನಮ್ಮ ಮನೆಗೆ ಹೋಗಲು ಡಾಮರು ರಸ್ತೆ ಕೊಡದಿದ್ದರೂ ತೊಂದರೆ ಇಲ್ಲ. ಸುಗಮವಾಗಿ ನಡೆದು ಹೋಗಲು ಕಾಲುದಾರಿ, ಕುಡಿಯುವ ನೀರು ಒದಗಿಸಿ ಕೊಡಲಿ. ಈ ಬಗ್ಗೆ ಪಂಚಾಯತ್ ಗೆ ಮನವಿ ಮಾಡಿದ್ದೇವೆ. ಪಂಚಾಯತ್ ಬೇರೆ ಕಾರಣ ಹೇಳಿ ನಮ್ಮನ್ನು ಅಲಾಡಿಸುತ್ತಿದೆ ಎಂದು ನೋವು ತೋಡಿಕೊಂಡರು.