ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರುಪರೀಕ್ಷೆಗೆ ಕನ್ನಡ ಪ್ರಾಧಿಕಾರ ಆಗ್ರಹ
ಮಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ ನಡೆಸಿರುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆಗಿದೆ. ಕನ್ನಡದಲ್ಲಿ ಸರಿಯಾದ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರಕಾರವನ್ನು ಆಗ್ರಹಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಮಲೆ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರವಿವಾರ ನಡೆದ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ‘ನೆಲ ನಮ್ಮದು ಜಲ ನಮ್ಮದು ಉದ್ಯೋಗವೂ ನಮ್ಮದೆ’ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉದ್ಯಮ, ಕೈಗಾರಿಕೆಗಳ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯ ಯುವಜನತೆಗೆ ಕಡ್ಡಾಯ ಆದ್ಯತೆ ಒದಗಿಸುವ ಸಾಧ್ಯತೆಗಳ ಕುರಿತು, ಈಗ ಆಗುತ್ತಿರುವ ಅವಕಾಶ ನಿರಾಕರಣೆಗೆ ಸಂಬಂಧಿಸಿ ಚರ್ಚೆ, ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಪಿಎಸ್‌ಸಿಗೆ ಕನ್ನಡಕ್ಕೆ ಅನುವಾದ ಮಾಡುವ ಸಮಸ್ಯೆ ಇದ್ದರೆ ಆ ಅನುವಾದದ ಜವಾಬ್ದಾರಿಯನ್ನು ಕನ್ನಡ ಪ್ರಾಧಿಕಾರ ತೆಗದುಕೊಳ್ಳುತ್ತದೆ. ಕೆಪಿಎಸ್‌ಸಿ ಈಗ ಮಾಡಿದ ತಪ್ಪುಗಳು ಪುನರಾವರ್ತನೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಕನ್ನಡ ಪ್ರಾಧಿಕಾರ ಆಗ್ರಹಿಸುತ್ತದೆ ಎಂದು ಹೇಳಿದರು.
ನಗರದ ಪ್ರದೇಶಗಳ ಅಭ್ಯರ್ಥಿಗಳು ಕನ್ನಡದಲ್ಲಿ ಬರೆದರೂ ಅವರಿಗೆ ಇಂಗ್ಲಿಷ್ ಅರ್ಥವಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕಲಿತವರಿಗೆ ಇಂಗ್ಲಿಷ್‌ನಲ್ಲಿರುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದ ಕಾರಣ ಅರ್ಥವಾಗದ ಪ್ರಶ್ನೆ ಗಳನ್ನು ನೀಡಿ ,ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಗ್ಗಿಸಿ , ಅವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವುದು ಇದು ಕನ್ನಡ ವಿರೋಧಿ ನಿಲುವು ಆಗಿದೆ. ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪರ ಸಂಘಟನೆಗಳು,ಕನ್ನಡ ಪರ ಚಿಂತಕರು ಖಂಡಿಸಿದ್ದಾರೆ ಎಂದರು.
ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಮೊದಲು ಇಂಗ್ಲಿಷ್‌ನಲ್ಲಿ ಪ್ರಶ್ನೆಗಳನ್ನು ಸಿದ್ದಪಡಿಸಿ ಆ ಬಳಿಕ ಯಾರಲ್ಲೊ ಕನ್ನಡಕ್ಕೆ ಅನುವಾದ ಮಾಡಿಸಿದ್ದಾರೆ. ಈ ಅನುವಾದದಲ್ಲಿ ಒಟ್ಟು 60 ತಪ್ಪುಗಳಿವೆ.ಈ ತಪ್ಪುಗಳ ಜೊತೆಗೆ ಭಾಷೆಯನ್ನು ಅರ್ಥ ಮಾಡುವುದು ಯಾರಿಗೂ ಸಾಧ್ಯವಿಲ್ಲದಾಗಿದೆ. ಅಷ್ಟು ಮಾತ್ರವಲ್ಲದೆ ಇಂಗ್ಲಿಷ್‌ನಲ್ಲಿ 4ಅಂತ ಇದ್ದರೆ ಕನ್ನಡದಲ್ಲಿ ಮೂರು ಆಗಿದೆ. ಭಾಷಿಕ ತಪ್ಪು,ವಿಷಯದ ತಪ್ಪು ಮತ್ತು ಅನುವಾದ ತಪ್ಪು ಇದ್ದ ಕಾರಣ ಇದನ್ನು ಬರೆದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕನ್ನಡದ ತಪ್ಪುಗಳನ್ನು ನೋಡಿದ ಯಾರೊ ಸಂಬಂಧಪಟ್ಟ ಅಧಿಕಾರಿಯೊಬ್ಬರ ಗಮನಕ್ಕೆ ತಂದಾಗ ‘ಕನ್ನಡದಲ್ಲಿ ಅರ್ಥ ವಾಗದಿದ್ದರೆ ಇಂಗ್ಲಿಷ್‌ನಲ್ಲಿರುವುದನ್ನು ನೋಡಿ ’ಎಂದು ಹೇಳಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ. ಇದನ್ನು ಗಮನಿಸಿದ ಕನ್ನಡ ಪ್ರಾಧಿಕಾರ ತಕ್ಷಣ ಕೆಪಿಎಸ್ಸಿಗೆ ಮೂರು ದಿವಸದೊಳಗೆ ವರದಿ ನೀಡುವಂತೆ ಪತ್ರ ಬರೆಯಲಾಗಿತ್ತು. ಅದರಂತೆ ವರದಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೈ ಸೇರಿದೆ.ಆ ವರದಿಯನ್ನು ಅಧ್ಯಯನ ಮಾಡಲಾಗುವುದು. 2008ರಿಂದ ಕೆಪಿಎಸ್‌ಸಿಗೆ ಆನೇಕ ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಆ ಪರೀಕ್ಷೆಗಳ ದಾಖಲೆ ತಯರಾಗುತ್ತಿದೆ. ಅದೂ ಅಲ್ಲದೆ ಕೆಪಿಎಸ್‌ಸಿಗೆ ಸರಕಾರ ನೀಡಿರುವ ಗೈಡ್‌ಲೈನ್ಸ್‌ಗಳನ್ನು ಸರಿಯಾದ ಅನುಷ್ಠಾನ ಆಗಿಲ್ಲ. ಕೆಪಿಎಸ್ಸಿ ಕಚೇರಿಯಲ್ಲಿ ಇರುವ ಸಮಸ್ಯೆ ಪರೀಕ್ಷೆ ಬರೆಯುವವರ ಮೇಲೆ ಆಗಬಾರದು. ಯಾಕೆಂದರೆ ಅವರು ಅನ್ನದ ದಾರಿ ಕಂಡು ಹುಡುಕಲು ಪ್ರಯತ್ನ ನಡೆಸುವವರು ಅವರಿಗೆ ತೊಂದರೆ ಆಗಬಾರದು. ಆದ ಕಾರಣ ಮೂರು ದಿನಗಳ ಒಳಗಾಗಿ ಸಮಗ್ರ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
*ಸರೋಜಿನಿ ಮಹಿಷಿ ವರದಿಯಲ್ಲಿ 14 ಅನುಷ್ಠಾನ ಯೋಗ್ಯ: ಬ್ಯಾಂಕು, ಸರಕಾರಿ ಆಸ್ಪತ್ರೆ, ಕೃಷಿ ವಿವಿ, ಪಶು ವಿವಿಗಳೊಂದಿಗೆ ಜನಸಾಮಾನ್ಯರು ನೇರ ಸಂಬಂಧ ಹೊಂದಿದ್ದಾರೆ. ಆದ ಕಾರಣ ಅಲ್ಲಿ ಭಾಷಾ ಸಮಸ್ಯೆಯಾಗಬಾರದು. ಸರೋಜಿನಿ ಮಹಿಷಿ ಆಯೋಗದ ವರದಿಯಲ್ಲಿ ಇರುವ ಶಿಫಾರಸ್ಸಿನಂತೆ ಪ್ರತಿ ಬ್ಯಾಂಕುಗಳಲ್ಲಿ ಸ್ಥಳೀಯರು ಇರಬೇಕಾಗಿದೆ. ಅದು ಕಾನೂನು ಆಗಿಲ್ಲ. ಹೀಗಿದ್ದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನಗಿರುವ ಅಧಿಕಾರವನ್ನು ಬಳಸಿಕೊಂಡು ಶೀಘ್ರದಲ್ಲೇ ಎಲ್ಲ ಬ್ಯಾಂಕುಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ಅವರಿಗೆ ಈ ಬಗ್ಗೆ ಮನವರಿಕೆ ಮಾಡಲಾಗುವುದು.ಒಂದು ವೇಳೆ ಬ್ಯಾಂಕ್‌ನ ಉನ್ನತ ಅಧಿಕಾರಿಗಳಿಗೆ ಕಸಾಧ್ಯವಾಗದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಬರೆಯಲಾ ಗುವುದು ಎಂದು ಹೇಳಿದರು.
ನ.1ರೊಳಗೆ ರಾಜ್ಯದ ಎಲ್ಲ ಬ್ಯಾಂಕುಗಳಲ್ಲಿ ಕನಿಷ್ಠ ಒಬ್ಬರಾದವರು ಕನ್ನಡ ಮಾತನಾಡುವವರು ಇರಬೇಕು ಎನ್ನುವುದು ಪ್ರಾಧಿಕಾರದ ಗುರಿಯಾಗಿದೆ ಎಂದು ಪುರುಷೋತ್ತಮ ಬಿಳಮಲೆ ಹೇಳಿದರು.
ಸರೋಜಿನಿ ಮಹಿಷಿ ಆಯೋಗದ ವರದಿಯಲ್ಲಿ 58ಶಿಫಾರಸ್ಸುಗಳನ್ನು ನೀಡಿದೆ. ಈ ವರದಿ ತಯಾರು ಮಾಡುವಾಗ ನಮ್ಮಲ್ಲಿ ಖಾಸಗಿ ಕಂಪೆನಿಗಳು ಇರಲಿಲ್ಲ. ಸರೋಜಿನಿ ಮಹಿಷಿ ವರದಿ ಸಂಪೂರ್ಣ ಸರಕಾರ, ಸರಕಾರದ ನೇಮಕಾತಿ ಮತ್ತು ಸರಕಾರದ ಕ್ರಮದ ಇತ್ಯಾದಿಗಳ ಮೇಲೆ ಕೇಂದ್ರೀಕೃತವಾಗಿದೆ. ಹೀಗಾಗಿ ಖಾಸಗಿ ಕಂಪೆನಿಗಳ ವಿಚಾರದಲ್ಲಿ ಈ ವರದಿಯಲ್ಲಿ ಏನು ಇಲ್ಲ ಎಂದು ನುಡಿದರು.
ಸರೋಜಿನಿ ಮಹಿಷಿ ವರದಿಯನ್ನು ಯಾಥಾವತ್ತಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಇದರಲ್ಲಿರುವ 58 ಶಿಫಾರಸ್ಸುಗಳಲ್ಲಿ 14 ಮಾತ್ರ ಅನುಷ್ಠಾನ ಯೋಗ್ಯವಾಗಿದೆ. ಉಳಿದ ಎಲ್ಲ ಶಿಫಾರಸ್ಸುಗಳು ಈಗಿನ ಕಾಲಕ್ಕೆ ಅನುಷ್ಠಾನವಾಗಿಲ್ಲ. ಅನುಷ್ಠಾನ ಯೋಗ್ಯವಾಗಿರುವ ಶಿಫಾರಸ್ಸುಗಳ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ಮುಂದೆ ಇದು ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚೆಯಾಗಿ ಶಾಸನವಾಗಬೇಕು ಎಂದು ಅಭಿಪ್ರಾಯಪಟ್ಟರು.
*ಉದ್ಯೋಗದಲ್ಲಿ ಶೇ 70ರಷ್ಟು ಕನ್ನಡಿಗರಿಗೆ ದೊರೆಯಬೇಕು: ಇವತ್ತಿನ ಕಾಲಘಟ್ಟದಲ್ಲಿ ಕರ್ನಾಟಕದ ಸರಕಾರಿ ಉದ್ಯೋಗದಲ್ಲಿ ಎಲ್ಲವೂ ಕನ್ನಡಿಗರಿಗೆ ದೊರೆಯುವುದು ಕಷ್ಠ. ಯಾಕೆಂದರೆ ಒಕ್ಕೂಟದ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ. ಹೀಗಿ ದ್ದರೂ ಉದ್ಯೋಗದಲ್ಲಿ ಶೇ 70ರಷ್ಟನ್ನು ಕನ್ನಡಿಗರಿಗೆ ನೀಡಬೇಕು ಎನ್ನುವುದು ಪ್ರಾಧಿಕಾರದ ನಿಲುವು ಆಗಿದೆ. ಸರೋಜಿನಿ ಮಹಿಷಿ ವರದಿ ಕಾನೂನು ಆಗಬೇಕು.ಈ ವರದಿ ಇನ್ನೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಮುಂದೆ ಚರ್ಚೆಗೆ ಹೋಗಿಲ್ಲ.ಹೀಗಾಗಿ ಕಾನೂನು ಆಗಿಲ್ಲ ಎಂದು ನುಡಿದರು.
ಮುಂದಿನ ನವೆಂಬರ್ ಒಳಗಾಗಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿ ಯಾವ ರೀತಿ ಕನ್ನಡ ಅನುಷ್ಠಾನ ಆಗಿದೆ ಎನ್ನುವು ದನ್ನು ಪರಿಶೀಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಖಾಸಗೀಕರಣದಿಂದಾಗಿ ಸರಕಾರಿ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿದೆ. ಐಎಎಸ್‌ನಂತಹ ಆಡಳಿತಾತ್ಮಕ ಹುದ್ದೆ 2008 ಹುದ್ದೆಗಳಿಗೆ ನೇಮಕ ಆಗುತ್ತಿತ್ತು. ಆದರೆ ಕಳೆದ ವರ್ಷ 780 ಹುದ್ದೆಗಳಿಗೆ ನೇಮಕ ಆಗಿದೆ. ಖಾಸಗೀಕರಣ ಎಲ್ಲವನ್ನು ಆಕ್ರಮಿಸಿಕೊಂಡಿದೆ. ಖಾಸಗಿ ಕಂಪೆನಿಗಳಿಗೆ ನೆಲೆಕಂಡುಕೊಳ್ಳಲು ಸರಕಾರ ನೆರವಾಗುತ್ತದೆ. ಈಗಿನ ಸರಕಾರಗಳಿಗೆ ಉದ್ಯೋಗಾವಕಾಶ ಸೃಷ್ಟಿಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದರು.
ಮದ್ರಸದಲ್ಲಿ ಕನ್ನಡ ಅನುಷ್ಠಾನಕ್ಕೆ ನಿಧಾನ ಹೆಜ್ಜೆ : ಮದ್ರಸಗಳಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಧಾನವಾಗಿ ಹೆಜ್ಜೆ ಇರಿಸಲಿದೆ. ಹೆಚ್ಚಿನವರು ಅನುಷ್ಠಾನಕ್ಕೆ ಒಲವು ವ್ಯಕ್ತಪಡಿಸಿದ್ದಾರೆ. ಕೆಲವರಿಂದ ವಿರೋಧ ಕಂಡು ಬಂದಿದೆ.ಆದರೆ ನಾವು ಈ ವಿಚಾರದಲ್ಲಿ ಅವಸರ ಮಾಡುವುದಿಲ್ಲ ಎಂದು ಪಶ್ನೆಯೊಂದಕ್ಕೆ ಉತ್ತರಿಸಿದರು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮ,ಕೈಗಾರಿಕೆಗಳಲ್ಲಿ ಉದ್ಯೋಗ ನೇಮಕಾತಿಯ ಸಂದರ್ಭ ಸ್ಥಳೀಯರಿಗೆ ಆದ್ಯತೆ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇದೇ ಸಂದರ್ಭದಲ್ಲಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ನಿವೃತ್ತ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ಪ್ರೊ.ಶಿವರಾಮ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ರಾಜರಾಮ್ ತೋಳ್ಪಾಡಿ, ಡಾ.ಪೂವಪ್ಪ ಕಣಿಯೂರು, , ಎಂಜಿ ಹೆಗಡೆ,ಆಯಿಷಾ ಫರ್ಝಾನ,ಮಂಜುಳಾ ನಾಯಕ್, ದಿನೇಶ್ ಹೆಗ್ಡೆ ಉಳೆಪಾಡಿ, ದೇವದಾಸ್, ಯಾದವ್ ಶೆಟ್ಟಿ ,ಮುಖೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.