ಉಳ್ಳಾಲ ಕಸಾಪದಿಂದ 'ಭಾಷಾ ಬಾಂಧವ್ಯ' ಕಾರ್ಯಕ್ರಮ
ವಿಕಾಸಕ್ಕೆ ಭಾಷೆಯೇ ಕೀಲಿಕೈ : ಡಾ. ಕೈರೋಡಿ.
ಮಂಗಳೂರು: ಮಾನವನ ವಿಕಾಸಕ್ಕೆ ಭಾಷೆಯೇ ಕೀಲಿಕೈ. ಬಹುಭಾಷೆಗಳ ಕಲಿಕೆ ಮತ್ತು ಭಾಷಿಕರ ನಡುವಿನ ಬಾಂಧವ್ಯ ಹಾಗೂ ಸಾಮರಸ್ಯದ ಬದುಕು ಸಮಾಜದ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಸಾಮರಸ್ಯವನ್ನು ಕದಡುವ ವಿಷಯಗಳನ್ನು ಕೆದಕಬಾರದು ಎಂದು ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿ ಅವರು ಅಭಿಪ್ರಾಯಪಟ್ಟರು.
ಅವರು ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದಕ ಉಡುಪಿ ಜಿಲ್ಲೆ, ಸೈಂಟ್ ಜೋಸೆಫ್ ಜೋಯ್ ಲ್ಯಾಂಡ್ ಹೈಸ್ಕೂಲ್, ಕೊಲ್ಯ, ಸೋಮೇಶ್ವರ ಇವರ ಸಂಯುಕ್ತ ಸಹಯೋಗದೊಂದಿಗೆ ಸೈಂಟ್ ಜೋಸೆಫ್ ಜೋಯ್ ಲ್ಯಾಂಡ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ 'ಕನ್ನಡ ಕಲರವ - ಭಾಷಾ ಬಾಂಧವ್ಯ ಮತ್ತು ಸಾಮರಸ್ಯ ಚಿಂತನ' ಎಂಬ ವಿಷಯದ ಕುರಿತಾಗಿ ಉಪನ್ಯಾಸ ವನ್ನು ನೀಡಿದರು.
ಭಾಷೆ ಬೆಳೆಯುವುದು ಸಮೂಹದ ಜೊತೆಗಿನ ಸಂವಹನದೊಂದಿಗೆ. ಭಾಷೆಯ ಬಗೆಗಿನ ದುರಭಿಮಾನ ಸಲ್ಲದು. ನಾಡಗೀತೆಯಲ್ಲಿ ಹೇಳಿರುವ ಸೋದರ ಭಾವದ ಮನೋಭಾವವು ಎಲ್ಲರಲ್ಲೂ ಜಾಗೃತವಾಗಬೇಕು. ಕನ್ನಡ ಭಾಷೆಯು ಬೇರೆ ಭಾಷೆಯ ಜೊತೆಗೆ ಕೊಡುಕೊಳ್ಳುವಿಕೆಯೊಂದಿಗೆ ಒಡನಾಡುವ ಕೊಂಡಿಯಾಗಬೇಕು ಎಂದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಸತೀಶ್ ನಾಯಕ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕೆಡಿಸುವ ಮಾತಿಗೆ ಕಿವಿಕೊಡದಿರಿ : ಕುಂಬ್ಳೆ
ಉಳ್ಳಾಲ ತಾಲೂಕು ಕಸಾಪ ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಅವರು ಅಧ್ಯಕ್ಷತೆಯನ್ನು ವಹಿಸಿ ಕರಾವಳಿಯಲ್ಲಿ ಸಾಮರಸ್ಯದ ಬೇರುಗಳು ಗಟ್ಟಿಯಾಗಿವೆ. ಅದನ್ನು ಕೆಡಿಸುವ ಮಾತುಗಳಿಗೆ ಕಿವಿಕೊಡದೆ ಎಲ್ಲ ಭಾಷೆ, ಜಾತಿ ಧರ್ಮ ವಿಚಾರಗಳ ಒಳಿತನ್ನು ಸ್ವೀಕಾರ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಕಾರ್ಯದರ್ಶಿಗಳಾಗಿರುವ ದೀಪಕ್ ರಾಜ್, ಉಪಾಧ್ಯಕ್ಷರಾಗಿರುವ ಮುರಳೀಧರ ಕಾಮತ್, ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಭಟ್ , ಉಳ್ಳಾಲ ತಾಲೂಕು ಘಟಕದ ಕಾರ್ಯದರ್ಶಿಗಳಾಗಿರುವ ಎಡ್ವರ್ಡ್ ಲೋಬೋ, ಕೋಶಾಧಿಕಾರಿಗಳಾಗಿರುವ ಲಯನ್ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಸಂಚಾಲಕರಾದ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸೌಹಾರ್ದ ಸಂಗೀತ
ಕಾರ್ಯಕ್ರಮದಲ್ಲಿ ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ ಸೋಮೇಶ್ವರ ಇದರ ಸಹಕಾರದೊಂದಿಗೆ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಸೌಹಾರ್ದ ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡ, ತುಳು, ಬ್ಯಾರಿ, ಕೊಂಕಣಿ, ಹಿಂದಿ ಭಾಷೆಗಳ ಗೀತಗಾಯನವನ್ನು ತೋನ್ಸೆ ಪುಷ್ಕಳ ಕುಮಾರ್, ಮುರಳೀಧರ ಕಾಮತ್, ಹುಸೇನ್ ಕಾಟಿಪಳ್ಳ, ರಮೇಶ್ ಸಾಲ್ಯಾನ್, ಮಲ್ಲಿಕಾ ಶೆಟ್ಟಿ, ರೋನಿ ಕ್ರಾಸ್ತಾ, ವೈಷ್ಣವಿ, ಪರಮೇಶ್ವರಿ ಅವರು ನಡೆಸಿಕೊಟ್ಟರು. ಪ್ರಕಾಶ್ ಕುಂಬ್ಳೆ ಅವರು ಕೀಬೋರ್ಡ್, ದೀಪಕ್ ರಾಜ್ ಉಳ್ಳಾಲ್ ಅವರು ತಬ್ಲಾದಲ್ಲಿ, ನವಗಿರಿ ಗಣೇಶ್ ಅವರು ರಿದಂ ಪ್ಯಾಡ್ ನಲ್ಲಿ ಸಹಕರಿಸಿದರು.