ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ಭಾಷಾ ದಿನಾಚರಣೆ
ಮಂಗಳೂರು: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ಮಂಗಳವಾರ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ.ಯು.ಕೆ. ಮೋನು ಕಣಚೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಯು.ಬಿ. ಮುಹಮ್ಮದ್ ಒಕ್ಕೂಟದ ಲಾಂಛನ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್. ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕಾಸ್ಟಲಿನೊ, ಅಬ್ದುಲ್ ಸತ್ತಾರ್ ಆರಂಗಳ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್ ಭಾಗವಸಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಸಾಹಿತಿ ಮುಹಮ್ಮದ್ ಬಡ್ಡೂರು, ಪ್ರೊ. ಇಬ್ರಾಹೀಂ ಬ್ಯಾರಿ, ಇಸ್ಮಾಯಿಲ್ ಮೂಡುಶೆಡ್ಡೆ, ಸತೀಶ್ ಸುರತ್ಕಲ್, ರಹೀಮ್ ಬಿ.ಸಿ.ರೋಡ್ ಅವರನ್ನು ಸನ್ಮಾನಿಸಲಾಯಿತು.
ಬ್ಯಾರಿ ಸಂಗೀತ ರಸಮಂಜರಿ, ಬ್ಯಾರಿ ಕವ್ವಾಲಿ, ಕಿರು ಹಾಸ್ಯ ಪ್ರಹಸನಗಳು ಪ್ರದರ್ಶನಗೊಂಡಿತು. ಬಹುಭಾಷಾ ಸಂಗೀತ ಸೌಹಾರ್ದ ಸಂಗಮದಲ್ಲಿ ಬ್ಯಾರಿ, ತುಳು, ಕೊಂಕಣಿ, ಕನ್ನಡ, ಮಲಯಾಳಂ, ಹಿಂದಿ, ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಖಾಲಿದ್ ಉಜಿರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಕಂದಾವರ ವಂದಿಸಿದರು. ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.