ಬಿಲ್ಡಿಂಗ್ ಲೈಸೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ ಆ್ಯಪ್ ಬಿಡುಗಡೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಅಭಿವೃದ್ಧಿಪಡಿಸಿದ ಎಂಸಿಸಿ ಬಿಲ್ಡಿಂಗ್ ಲೈಸೆನ್ಸ್ ಮ್ಯಾನೇಜ್ ಮೆಂಟ್ ಸಿಸ್ಟಂ ಆ್ಯಪ್ ಅನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸೋಮವಾರ ಪಾಲಿಕೆಯಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಪಾಲಿಕೆ ವ್ಯಾಪ್ತಿಯ ಕಟ್ಟಡ ಮಂಜೂರಾತಿ ನಕ್ಷೆಗಳ ಉಲ್ಲಂಘನೆ, ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆ ಮತ್ತು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡ ಅಥವಾ ಕಟ್ಟಡಗಳ ಭಾಗ ತೆರವು ಮಾಡಲು ಕಾರ್ಯಪಡೆ ರಚಿಸಿ, ಅಕ್ರಮ ನಿರ್ಮಾಣ ತಡೆಯಲು ತಂತ್ರಾಂಶ ಅಭಿವೃದ್ಧಿ ಮಾಡಲು ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿ ಮೊದಲ ಬಾರಿಗೆ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದರು.
ಅರ್ಜಿದಾರರು ಈ ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಕಟ್ಟಡ ಕಾಮಗಾರಿಯ ಭೂಮಿ ಅಗೆತದಿಂದ ಪಂಚಾಂಗ, ಸ್ಲ್ಯಾಬ್, ಪೂರ್ಣಗೊಳಿಸುವ ತನಕ ಎಲ್ಲಾ ಹಂತಗಳಲ್ಲಿ ನಿಯಮ ಉಲ್ಲಂಘನೆಯಾಗದಂತೆ ಪಾಲಿಕೆ ಇಂಜಿನಿಯರ್‌ಗಳು ಪರಿಶೀಲನೆ ನಡೆಸಲಿದ್ದಾರೆ. ನಿಯಮ ಪಾಲನೆಗೆ ಹೊಸ ತಂತ್ರಾಂಶ ನೆರವಾಗಲಿದೆ ಎಂದು ಮೇಯರ್ ತಿಳಿಸಿದರು.
ಈ ಸಂದರ್ಭ ಉಪಮೇಯರ್ ಸುನೀತಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಅನಿಲ್ ಕುಮಾರ್, ಆಯುಕ್ತ ಆನಂದ್ ಸಿ.ಎಲ್., ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಆನಂದ್, ನಗರ ಯೋಜನಾಧಿಕಾರಿ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.