ಕೊಣಾಜೆ, ತೌಡುಗೋಳಿ ಪರಿಸರದಲ್ಲಿ ಮತ್ತೆ ಚಿರತೆಯ ಹೆಜ್ಜೆ ಗುರುತು ಪತ್ತೆ
ಕೊಣಾಜೆ : ಕಳೆದ ಕೆಲವು ದಿನಗಳಲ್ಲಿ ಕೊಣಾಜೆ, ತೌಡುಗೋಳಿ, ನರಿಂಗಾನ, ಬಾಳೆಪುಣಿ ಪರಿಸರದಲ್ಲಿ ಸಾರ್ವಜನಿಕರು ಚಿರತೆಯ ಬಗ್ಗೆ ಆತಂಕಗೊಂಡಿದ್ದರೆ. ಇದೀಗ ಮತ್ತೆ ಮಂಗಳವಾರ ರಾತ್ರಿ ಕೊಣಾಜೆ ಗ್ರಾಮದ ಅಸೈಗೋಳಿ ಕೆಎಸ್ ಆರ್ ಪಿ ಕ್ವಾಟ್ರಸ್, ಪಟ್ಟೋರಿ ಹಾಗೂ ನರಿಂಗಾನ ಗ್ರಾಮದ ಬತೌಡುಗೋಳಿಯ ಶಾಂತಿಪಳಿಕೆ ಪ್ರದೇಶದಲ್ಲಿ ಕೆಲವರಿಗೆ ಚಿರತೆ ಕಾಣಸಿಕ್ಕಿದ್ದು ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಅಸೈಗೋಳಿ ಪೊಲೀಸ್ ಕ್ವಾಟ್ರರ್ಸ್, ಕಲಾಯಿ ಮದಕ ಪಟ್ಟೋರಿ ಜಾತ್ರಾ ಗದ್ದೆಯ ಪರಿಸರದಲ್ಲಿ ಸುಮಾರು ಎಂಟು ಗಂಟೆಯ ವೇಳೆಗೆ ಚಿರತೆಯನ್ನು ನೋಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಈ ಪರಿಸರದಲ್ಲಿ ಸಂಜೆ ಮತ್ತು ಮುಂಜಾನೆ ಕ್ವಾಟ್ರರ್ಸ್ ನ ಅನೇಕ ಮಂದಿ ವಾಕಿಂಗ್ ಹೋಗುತ್ತಿದ್ದು, ಚಿರತೆ ಪತ್ತೆಯಾಗಿರುವುದರಿಂದ ಯಾರೂ ಕೂಡಾ ಬೆಳಗ್ಗೆ, ರಾತ್ರಿ ವಾಕಿಂಗ್ ಹೋಗದಂತೆ ಹಾಗೂ ಮುನ್ನಚರಿಕೆ ವಹಿಸುವಂತೆ ಕರೆ ನೀಡಿದ್ದಾರೆ.
ಅದೇ ರೀತಿ ಮಂಗಳವಾರ ರಾತ್ರಿ ಸುಮಾರು 9.30 ರ ವೇಳೆಗೆ ನರಿಂಗಾನ ತೌಡುಗೋಳಿ ಶಾಂತಿಪಳಿಕೆ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ತೌಡುಗೋಳಿ ಜಂಕ್ಷನ್ ಒಳ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಇದೀಗ ಅಲ್ಲಿಂದ ಅರ್ಧ ಕಿ. ಮೀ. ದೂರದ ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಬಳಿ ಚಿರತೆ ಪ್ರತ್ಯಕ್ಷವಾಗಿದೆ.
ವಾರದ ಹಿಂದೆ ಕೊಲ್ಲರಕೋಡಿ, ಎರಡು ದಿನಗಳ ಹಿಂದೆ ತೌಡುಗೋಳಿ ಜಂಕ್ಷನ್ ಬಳಿ ಕಂಡಿದ್ದು ಇದೀಗ ತೌಡುಗೋಳಿ ಯಿಂದ ಕೇವಲ ಅರ್ಧ ಕಿ. ಮೀ. ದೂರದ ಶಾಂತಿಪಳಿಕೆ ದೇವಸ್ಥಾನದ ಬಳಿ ಮಂಗಳವಾರ ರಾತ್ರಿ 10ರ ಹೊತ್ತಿಗೆ ರಸ್ತೆ ಪಕ್ಕದ ಚರಂಡಿಯಿಂದ ಜಿಗಿದು ಪಕ್ಕದ ಗುಡ್ಡಕ್ಕೆ ಓಡಿರುವುದನ್ನು ಮನೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ದಿನಸಿ ಅಂಗಡಿಯೊಂದರ ಸಿಬ್ಬಂದಿ ಸಿದ್ದಿಕ್ ಮದಕ ಕಂಡಿದ್ದಾರೆ ಎನ್ನಲಾಗಿದ್ದು, ಆ ಹಿನ್ನೆಲೆಯಲ್ಲಿ ಕುಂಞಿ ತೋಕೆ, ನಾಸಿರ್, ಅನಸ್, ಶಫೀಕ್ ಸೇರಿದಂತೆ ಯುವಕರ ತಂಡ ಚಿರತೆ ಓಡಿದ ಪ್ರದೇಶದಲ್ಲಿ ಹೆಜ್ಜೆ ಗುರುತಿನ ದೃಶ್ಯ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ್ದಾರೆ.
ಒಟ್ಟಿನಲ್ಲಿ ಇತ್ತೀಚೆಗೆ ಈ ಪರಿಸರದಲ್ಲಿ ಚಿರತೆಯ ಆತಂಕ ಹೆಚ್ಚಾಗಿದ್ದು ಜನರು ಭಯದಿಂದ ಓಡಾಡುವಂತಾಗಿದೆ.