ಸಮಾಜ ಸೇವೆಯು ವಿಭಿನ್ನ ಮತ್ತು ಅರ್ಥಪೂರ್ಣವಾಗಿರಲಿ: ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
► ಎಂ ಫ್ರೆಂಡ್ಸ್ ಕಾರುಣ್ಯ ಯೋಜನೆಯ 7ನೆ, ಕ್ಲಾಸ್ ಆನ್ ವ್ಹೀಲ್ ಯೋಜನೆಯ ಪ್ರಥಮ ವಾರ್ಷಿಕ ಕಾರ್ಯಕ್ರಮ ► ಕ್ಲಾಸ್ ಆನ್ ವ್ಹೀಲ್ ಯೋಜನೆಯ ʼಜೀವನಪೂರ್ತಿ ಕೊಡುಗೆʼಯ ಲೋಗೋ ಅನಾವರಣ
ಮಂಗಳೂರು: ಬಹುತೇಕ ಮಂದಿ ಒಂದಲ್ಲೊಂದು ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾರೆ. ಈ ಸೇವೆಯು ಸಮಾಜದ ಮೇಲೆ ಪರಿಣಾಮ ಬೀರಬೇಕಾದರೆ ಅದು ವಿಭಿನ್ನ ಮತ್ತು ಅರ್ಥಪೂರ್ಣವಾಗಿರಬೇಕು ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಮಂಗಳೂರಿನ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ವೆನ್ಲಾಕ್ ಮಕ್ಕಳ ಆಸ್ಪತ್ರೆ ವಿಭಾಗದ ಆರ್‌ಎಪಿಸಿಸಿ ಕಟ್ಟಡದ ಮೂರನೇ ಮಹಡಿಯ ಸಭಾಂಗಣದಲ್ಲಿ ಸೋಮವಾರ ನಡೆದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆ ಗಾರರಿಗೆ ರಾತ್ರಿಯ ಊಟ ನೀಡುವ ಕಾರುಣ್ಯ ಯೋಜನೆಯ ಏಳನೇ ಮತ್ತು ಪುತ್ತೂರಿನಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ಬಸ್‌ನಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಕ್ಲಾಸ್ ಆನ್ ವ್ಹೀಲ್ ಯೋಜನೆಯ ಪ್ರಥಮ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲಾ ಕೇಂದ್ರದಲ್ಲೇ ನಮ್ಮ ತಂದೆಯ ಮನೆಯಿದೆ. ಪಕ್ಕದಲ್ಲೇ ಸರಕಾರಿ ಆಸ್ಪತ್ರೆಯೂ ಇದೆ. ಅಲ್ಲಿನ ರೋಗಿಗಳನ್ನು ಉಪಚರಿಸುವವರಿಗೆ ಸೂಕ್ತ ವ್ಯವಸ್ಥೆ ಇಲ್ಲ. ದಿನನಿತ್ಯ ಹಲವು ಮಂದಿ ನಮ್ಮ ಮನೆಯ ಆವರಣದಲ್ಲೇ ಅಡುಗೆ ಮಾಡಿ ಕೊಳ್ಳುತ್ತಿರುವುದನ್ನು ನೆನಪಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಂ ಫ್ರೆಂಡ್ಸ್ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜ ಸೇವೆಯನ್ನು ಅರ್ಥಪೂರ್ಣವಾಗಿಸಿದೆ. ಈ ವಿಭಿನ್ನವಾದ ಕಲ್ಪನೆಯನ್ನು ಎಂಫ್ರೆಂಡ್ಸ್‌ನ ಸದಸ್ಯರಲ್ಲಿ ಬಿತ್ತಿ ಅದನ್ನು ಯಶಸ್ವಿಯಾಗಿ ಸಾಕಾರಗೊಳಿಸಿದವರನ್ನು ಅಭಿನಂದಿಸಲೇಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಫ್ರೆಂಡ್ಸ್ ಟ್ರಸ್ಟ್ ಚೈರ್‌ಮ್ಯಾನ್ ಝಕರಿಯಾ ಜೋಕಟ್ಟೆ ಮಾತನಾಡಿ ನನಗೆ ಬಡತನದ ಕಷ್ಟದ ಅರಿವು ಇದೆ. ಈ ಹಂತ ತಲುಪಲು ಸಾಕಷ್ಟು ಶ್ರಮಿಸಿರುವೆ. ಕಷ್ಟದ, ಬಡತನದ ಆ ದಿನದಲ್ಲೂ ನಾನು ದಾನ ನೀಡುತ್ತಿದ್ದೆ. ನಾವು ಮನಸ್ಸಾರೆ ದಾನ ಮಾಡಿದರೆ ನಮ್ಮ ಸಂಪತ್ತು ವೃದ್ಧಿಯಾಗಲಿದೆಯೇ ವಿನಃ ನಮಗೆ ಎಂದಿಗೂ ಕಷ್ಟ-ನಷ್ಟವಾಗದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಡಿ.ಎಸ್. ಶಿವಪ್ರಕಾಶ್ ಮಾತನಾಡಿ ಹಸಿವಿನ ಮುಂದೆ ಯಾವುದೂ ಇಲ್ಲ. ಹಾಗಾಗಿ ಅನ್ನದಾನ ಮಾಡಲು ಮನಸ್ಸು ಮಾಡಬೇಕು. ಇದರಿಂದ ದಾನಿಗಳ ಮುಖದಲ್ಲಿ ಪ್ರಸನ್ನತೆ ಕಾಣಬಹುದು ಎಂದರು.
ಕೊಡುಗೈ ದಾನಿಯೂ ಆಗಿರುವ ದುಬೈಯ ಬ್ಲೂ ರೋಯಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್ ಮಾತನಾಡಿ ಹಣವಿದ್ದರೆ ಸಾಲದು, ಇನ್ನೊಬ್ಬರಿಗೆ ಉಪಕಾರ ಮಾಡುವ ಮನಸ್ಸು ಬೇಕು. ಕೊಡುವ ಮನಸ್ಸು ಇಲ್ಲದಿದ್ದರೆ ಹಣ ಕೂಡಿಟ್ಟರೂ ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂದರು.
ಕಾರುಣ್ಯ ಯೋಜನೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಎಂಫ್ರೆಂಡ್ಸ್‌ನ ಅಭಿಮಾನಿಗಳಾದ ಸಿ.ಎಚ್. ಇಬ್ರಾಹೀಂ ಮತ್ತು ಮನ್ಸೂರ್ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಶುಭ ಹಾರೈಸಿದರು. ಕಾರುಣ್ಯ ಯೋಜನೆಯ ಮುಖ್ಯಸ್ಥ ಮುಹಮ್ಮದ್ ಹನೀಫ್ ಗೋಳ್ತಮಜಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಫ್ರೆಂಡ್ಸ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುಜಾಹ್ ಮುಹಮ್ಮದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರೆ ವಂದಿಸಿದರು. ಕ್ಲಾಸ್ ಆನ್ ವ್ಹೀಲ್ ಯೋಜನೆಯ ಮುಖ್ಯಸ್ಥ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಜೀವನಪೂರ್ತಿ ಕೊಡುಗೆಗೆ ಚಾಲನೆ
ಕ್ಲಾಸ್ ಆನ್ ವ್ಹೀಲ್ ಯೋಜನೆಯ ಯಶಸ್ಸಿಗೆ ಮಾಸಿಕ 1 ಲಕ್ಷ ರೂ. ಬೇಕಾಗುತ್ತದೆ. ಈಗಾಗಲೆ ದಾನಿಗಳ ನೆರವಿನಿಂದ ಅದನ್ನು ಭರಿಸಲಾಗುತ್ತದೆ. ಇದೀಗ ಈ ಯೋಜನೆಗೆ ಜೀವನಪೂರ್ತಿ ತಾನು ಕೊಡುಗೆ ನೀಡುವುದಾಗಿ ಘೋಷಿಸಿದ ಎಂಫ್ರೆಂಡ್ಸ್ ಟ್ರಸ್ಟ್ ಚೈರ್‌ಮ್ಯಾನ್ ಝಕರಿಯಾ ಜೋಕಟ್ಟೆ ಕಾರ್ಯಕ್ರಮದಲ್ಲೇ ಆ ಯೋಜನೆಯ ಲೋಗೋವನ್ನು ಡಿಸಿ ಮೂಲಕ ಅನಾವರಣಗೊಳಿಸಿದರು.