ಬಿಜೆಪಿಗರು ವಿಕೃತ ಮನಸ್ಥಿತಿಯಿಂದ ಹೊರಬರಲಿ: ಪದ್ಮರಾಜ್
ಪದ್ಮರಾಜ್
ಮಂಗಳೂರು : ಅಧಿಕಾರ ಕಳೆದುಕೊಂಡು ವಿಚಲಿತರಾಗಿರುವ ಬಿಜೆಪಿಗರು ರಾಜ್ಯ ಕಾಂಗ್ರೆಸ್ ಸರಕಾರದ ನೀತಿಗಳ ವಿರುದ್ಧ ಮನಬಂದಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಅನು ಷ್ಠಾನಗೊಳಿಸಿದ್ದರಿಂದ ಹತಾಶಗೊಂಡಿರುವ ಬಿಜೆಪಿಗರು ಮೊದಲು ವಿಕೃತ ಮನಸ್ಸಿನಿಂದ ಹೊರಬರಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಉತ್ತಮ ಕಾರ್ಯ ಮಾಡುತ್ತಿರುವಾಗ ವಿಪಕ್ಷದವರು ಸರಕಾರದ ಜತೆ ಇರುವುದನ್ನು ಬಿಟ್ಟು, ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ಮುಖ್ಯಮಂತ್ರಿ, ಸಚಿವರ ಜೊತೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸಿದರೆ, ಟಾರ್ಗೆಟ್ ಫಿಕ್ಸ್ ಮಾಡಲು ಮೀಟಿಂಗ್ ಕರೆದಿದ್ದಾರೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ರ ಹೇಳಿಕೆಯು ಬಾಲಿಶದಿಂದ ಕೂಡಿದೆ ಎಂದಿದ್ದಾರೆ.
ಉಡುಪಿ ಕಾಲೇಜಿನಲ್ಲಿ ನಡೆದಿರುವ ವೀಡಿಯೋ ಪ್ರಕರಣವನ್ನು ಸರಕಾರವು ಗಂಭೀರವಾಗಿ ತೆಗೆದುಕೊಂಡಿದ್ದರೂ ಬಿಜೆಪಿಗರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿರುವುದು ನಾಚಿಕೆಗೇಡು. ವೀಡಿಯೋ ಪ್ರಕರಣದ ಷಡ್ಯಂತರ ಒಂದು ವರ್ಷದ ಮೊದಲೇ ಇತ್ತು ಎಂಬುದಾಗಿ ಶಾಸಕ ಭರತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಹಾಗಾದರೆ ಒಂದು ವರ್ಷದ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ಸರಕಾರಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಪದ್ಮರಾಜ್ ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಸುನೀಲ್ ಕುಮಾರ್, ಶಾಸಕರಾದ ವೇದವ್ಯಾಸ್ ಕಾಮತ್, ಯಶ್ಪಾಲ್ ಸುವರ್ಣರು ಎಸ್ಸಿ-ಎಸ್ಟಿ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಅನುದಾನ ಕಡಿತಗೊಳಿಸಿದೆ ಎಂದು ಆರೋಪ ಮಾಡುತ್ತಿರುವುದು ಖಂಡನೀಯ. ಈ ಶಾಸಕರಿಗೆ ದಲಿತರ ಮೇಲೆ ಕಾಳಜಿ ಇದ್ದರೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಎಂದು ಪದ್ಮರಾಜ್ ಪ್ರಶ್ನಿಸುತ್ತಿದ್ದಾರೆ.