ಪ್ರತಿಯೊಬ್ಬ ಹೆಣ್ಣು ಮಗಳಲ್ಲಿ ಮಾತೆ ಮರಿಯಳನ್ನು ಕಾಣೋಣ: ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ
ಮಂಗಳೂರು, ಸೆ.6: ಓರ್ವ ಹೆಣ್ಣು ಮಗಳ ಜನನ ಕುಟುಂಬದಲ್ಲಿ ಹರ್ಷ ಹಾಗೂ ಭರವಸೆ ಮೂಡಿಸುತ್ತದೆ. ದೇವರ ಯೋಜನೆ ಹಾಗೂ ಮನಕುಲವನ್ನು ಮುನ್ನಡೆಸುವಲ್ಲಿ ಆಕೆಯ ಪಾತ್ರ ಮಹತ್ವದ್ದಾಗಿದೆ. ಸೃಷ್ಟಿಯ ಕಾರ್ಯದಲ್ಲಿ ದೇವರು ಆಕೆಗೆ ವಿಶೇಷ ಸ್ಥಾನ ಕಲ್ಪಿಸಿದ್ದಾರೆ. ಸಂತ ಜೊಕಿಂ ಹಾಗೂ ಸಂತ ಅನ್ನಾ ಅವರ ಏಕೈಕ ಮಗಳಾಗಿ ಜನಿಸಿದ ಮೇರಿ ಮನುಕುಲಕ್ಕೆ ಹೊಸ ನಿರೀಕ್ಷೆ ತಂದಿಟ್ಟರು.
ಇಂದು ನಮ್ಮ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಬಲತ್ಕಾರ, ಕೊಲೆ ಇತ್ಯಾದಿ ಗಳನ್ನು ಗಮನಿಸಿದಾಗ ಮಹಿಳೆಯ ಮೂಲಭೂತ ಹಕ್ಕುಗಳು ಅಪಾಯದಲ್ಲಿದಂತೆ ತೋರುತ್ತವೆ. ಇಂತಹ ಘಟನೆ ಗಮನಿಸಿ ದಾಗ ನಾಗರಿಕ ಸಮಾಜ ಸ್ತ್ರೀಯರಿಗೆ ಗೌರವ ನೀಡುವಲ್ಲಿ ಸೋತಿದೆ ಎಂದು ಭಾಸವಾಗುತ್ತಿದೆ. ಮಹಿಳೆಗೆ ಮಾಡುತ್ತಿರುವ ದೌರ್ಜನ್ಯ ಮಾತೆ ಮರಿಯಳಿಗೆ ಮಾಡುವ ಅವಮಾನ. ಇದು ದೇವರು ಮೆಚ್ಚುವ ಕಾರ್ಯವಲ್ಲ. ಪ್ರತಿಯೊಬ್ಬ ಮಹಿಳೆಯು ದೇವ ಮಾತೆಯ ಪ್ರತೀಕ. ಅವರಲ್ಲಿ ಮಾತೆಯ ಪ್ರತಿರೂಪ ಕಂಡುಕೊಳ್ಳಲು ಮಾತೆ ಮರಿಯ ಕರೆ ನೀಡುತ್ತಾರೆ. ಮರಿಯಳ ಜನನದ ಹಬ್ಬವು ಪ್ರತಿಯೊಬ್ಬ ಮಹಿಳೆಗೆ ಗೌರವದಿಂದ ಕಾಣಲು ಒಂದು ಸುಸಂದರ್ಭವಾಗಲಿ. ನಿಮಗೆಲ್ಲರಿಗೂ ಮಾತೆ ಮರಿಯಳ ಜನುಮ ದಿನದ ಶುಭಾಶಯಗಳು.
-ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ, ಮಂಗಳೂರು ಬಿಷಪ್