ಯಾರೋ ಸಹಾಯ ಮಾಡುತ್ತಾರೆಂದು ಸಾಹಿತಿಗಳು ಬರೆಯುವುದಿಲ್ಲ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಮಂಗಳೂರು : ‘ಯಾರೋ ಸಹಾಯ ಮಾಡುತ್ತಾರೆಂದು ಸಾಹಿತಿಗಳು ಬರೆಯುವುದಿಲ್ಲ. ತಮ್ಮೊಳಗಿನ ತುಡಿತಗಳನ್ನು ತಮ್ಮ ಸಾಹಿತ್ಯದ ಮೂಲಕ ಹೊರ ಹಾಕಲು ಬರೆಯುತ್ತಾರೆ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇರುವಂತಹ ಮಾಧ್ಯಮ ಸಾಹಿತ್ಯ’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯ ಪಟ್ಟರು.
ಅವರು ಮಂಗಳೂರಿನ ಉತ್ಸವ್ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ಏರ್ಪಡಿಸಿದ್ದ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ ಹಾಗೂ ಚುಟುಕು ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಸಮಾರಂಭವನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚುಸಾಪದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ ನಾಯಕ್, ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ , ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ನಿರ್ಗಮನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನಿರ್ಗಮನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಅವರು ಚುಟುಕು ಸಾಹಿತ್ಯ ಪರಿಷತ್ತಿನ ಧ್ವಜ ಹಸ್ತಾಂತರ ಮಾಡುವ ಮೂಲಕ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿದರು. ಪದ ಸ್ವೀಕಾರ ಕಾರ್ಯಕ್ರಮ ದಲ್ಲಿ ಗೋಪಾಲಕೃಷ್ಣ ಶಾಸ್ತ್ರಿಯವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ 2023-24 ಅವಧಿಗೆ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕಾರ ಮಾಡಿದರು. ಉಪಾಧ್ಯಕ್ಷರಾಗಿ ಹಿತೇಶ್ ಕುಮಾರ್ ಎ., ಕಾರ್ಯದರ್ಶಿಯಾಗಿ ರಶ್ಮಿ ಸನಿಲ್, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ವರಿ ಎಚ್. ಬಜ್ಪೆ ಹಾಗೂ ಕೋಶಾಧಿಕಾರಿಯಾಗಿ ಭಾಸ್ಕರ್ ಎ. ವರ್ಕಾಡಿ ಅವರು ಅಧಿಕಾರವನ್ನು ಸ್ವೀಕರಿಸಿದರು.
ನೂತನ ಪದಾಧಿಕಾರಿಗಳನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಲಾಯಿತು. ಬಳಿಕ ಸಾಹಿತಿ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕು ಚುಸಾಪದ ಮಾಜಿ ಅಧ್ಯಕ್ಷರುಗಳಾದ ಮಹೇಶ್ ಆರ್ ನಾಯಕ್, ಮೊಹಮ್ಮದ್ ಇಸ್ಮಾಯಿಲ್, ರಘು ಇಡ್ಕಿದು, ಪ್ರೊ. ಪಿ. ಕೃಷ್ಣಮೂರ್ತಿ, ಯಶವಂತ್ ಡಿ.ಎಸ್, ಎನ್. ಸುಬ್ರಾಯ ಭಟ್, ಮಾಲತಿ ಶೆಟ್ಟಿ ಮಾಣೂರು, ಡಾ. ಸುರೇಶ್ ನೆಗಳಗುಳಿ, ರೇಮಂಡ್ ಡಿ ಕುನಾ ತಾಕೊಡೆ, ಕಾ.ವೀ.ಕೃಷ್ಣದಾಸ್, ಚುಸಾಪ ಮಾಜಿ ಜಿಲ್ಲಾಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರುಣಾ ನಾಗರಾಜ್, ಸಾಹಿತಿ ಪಾರ್ವತಿ ಶಾಸ್ತ್ರಿ, ಸಂಘಟಕ ಕವಿ ನಾರಾಯಣ ಕುಂಬ್ರ ಹಾಗೂ ಸಾಹಿತಿ ಗುಣಾಜೆ ರಾಮ ಚಂದ್ರ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗೆ ನಿಧನರಾದ ಸಾಹಿತಿ ಪತ್ರಕರ್ತ ಶೇಖರ ಅಜೆಕಾರು ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ನಡೆದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಉಪನ್ಯಾಸಕ ರಘು ಇಡ್ಕಿದು ಅವರು ವಹಿಸಿದ್ದರು.
ಕವಿಗಳಾದ ಶ್ಯಾಮ್ ಪ್ರಸಾದ್ ಭಟ್ ಗೋಷ್ಠಿಗೆ ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ಚುಟುಕು ವಾಚನ ಮಾಡಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಚುಟುಕು ರಚನಾ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಕು. ದಿಶಾ ಸಿ.ಜಿ. ಪ್ರಾರ್ಥಿಸಿದರು. ಗೋಪಾಲಕೃಷ್ಣ ಶಾಸ್ತ್ರಿ ಯವರು ಸ್ವಾಗತಿಸಿದರು. ಹಿತೇಶ್ ಕುಮಾರ್ ವಂದಿಸಿದರು. ರಶ್ಮಿ ಸನೀಲ್ ಹಾಗೂ ರಾಜೇಶ್ವರಿ ಎಚ್. ಬಜ್ಪೆ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ವರ್ಕಾಡಿ ಹಾಗೂ ಸೌಮ್ಯಾ ಗೋಪಾಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
"ಚುಟುಕಿಗೆ ಪ್ರೋತ್ಸಾಹ ನೀಡುವ ಕೆಲಸ ಅಗತ್ಯ. ಧಾವಂತದ ಜೀವನದಲ್ಲಿ ನಾಲ್ಕೇ ಸಾಲಿನಲ್ಲಿ ಪರಿಣಾಮಕಾರಿಯಾಗಿ ಸಂದೇಶ ಕೊಡುವ ಸಾಹಿತ್ಯ ಚುಟುಕು. ಚುಟುಕು ಸಾಹಿತ್ಯದ ಬೆಳವಣಿಗೆಗೆ ಸರಕಾರ ನೆರವು ನೀಡುವ ದೊಡ್ಡ ಮನಸ್ಸು ಮಾಡಬೇಕು"
- ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕಸಾಪ