ಮಂಗಳೂರು: ವಾಟ್ಸ್ಆ್ಯಪ್ ಸಂದೇಶವನ್ನು ನಂಬಿ 1 ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರ (credit: Meta AI)
ಮಂಗಳೂರು: ಆನ್ಲೈನ್ ಟ್ರೇಡಿಂಗ್ ಬಗ್ಗೆ ವಾಟ್ಸ್ಆ್ಯಪ್ ಮೂಲಕ ಬಂದ ಸಂದೇಶವನ್ನು ನಂಬಿದ ವ್ಯಕ್ತಿಯೊಬ್ಬರು 1 ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.16ರಂದು ತನಗೆ ವಾಟ್ಸ್ಆ್ಯಪ್ ಮೂಲಕ ಬಂದ ಸಂದೇಶದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಲಾಗಿತ್ತು. ಅದನ್ನು ನಂಬಿದ ತಾನು ವಾಟ್ಸ್ಆ್ಯಪ್ ಗ್ರೂಪ್ಗೆ ಸೇರ್ಪಡೆಗೊಂಡೆ. ನಂತರ ಗ್ರೂಪ್ ಅಡ್ಮಿನ್ ಕಳುಹಿಸಿದ ಲಿಂಕ್ ಅದುಮಿ ಅದಕ್ಕೂ ಜಾಯಿನ್ ಆದೆ. ಸೆಪ್ಟಂಬರ್ 1ರಿಂದ ಹಣ ಪಾವತಿಸುತ್ತಾ ಬಂದಿರುವೆ.
ಬಳಿಕ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಆಗಲಿಲ್ಲ. ಹಾಗೇ ತನ್ನ ಮನೆಯವರು ಮತ್ತು ಸ್ನೇಹಿತರಲ್ಲಿ ವಿಚಾರಿಸಿದಾಗ ತಾನು ಮೋಸ ಹೋಗಿರುವ ವಿಚಾರ ತಿಳಿಯಿತು. ಒಟ್ಟಿನಲ್ಲಿ ಸೆ.1ರಿಂದ ಅಕ್ಟೋಬರ್ 7ರವರೆಗೆ ಅಪರಿಚಿತರು ನಕಲಿ ಟ್ರೇಡಿಂಗ್ ಹೆಸರಿನಲ್ಲಿ ತನ್ನಿಂದ 1,25,67,726 ರೂ. ವನ್ನು ಆನ್ಲೈನ್ ಮೂಲಕ ಮೋಸ ಮಾಡಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.