ಮನಪಾ: ಘನತ್ಯಾಜ್ಯ ನಿರ್ವಹಣೆ ಹೊಸ ಟೆಂಡರ್ ರದ್ದು
ಹೊಸ ಡಿಪಿಆರ್ ವಿಶೇಷ ಸಭೆಯಲ್ಲಿ ಮಂಡಿನೆಗೆ ಮೇಯರ್ ನಿರ್ಣಯ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಈಗ ಆಗಿರುವ ಹೊಸ ಟೆಂಡರ್ ರದ್ದುಗೊಳಿಸಲು ಮನಪಾ ಸಾಮಾನ್ಯ ಸಭೆ ನಿರ್ಣಯಿಸಿದೆ. ಮಾತ್ರವಲ್ಲದೆ, ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಹೊಸ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ವಿಶೇಷ ಸಭೆಯಲ್ಲಿ ಅದನ್ನು ಮಂಡಿಸಿ ಮಂಜೂ ರಾತಿ ಪಡೆಯಲು ನೂತನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ತಮ್ಮ ಪ್ರಥಮ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ನಡೆಸುತ್ತಿದ್ದ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಪಾಲಿಕೆಯ 60 ವಾರ್ಡ್‌ಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸಿ ಪ್ರತ್ಯೇಕ ಪಾಕೇಜ್‌ಗಳಲ್ಲಿ ಮನೆ ಕಸ ಸಂಗ್ರಹ, ಸಾಗಾಟಕ್ಕೆ ವಾಹನಗಳ ಖರೀದಿ, ಮಾನವ ಸಂಪನ್ಮೂಲ ನಿರ್ವಹಣೆಯೊಂದಿಗೆ ಹೊಸ ಟೆಂಡರ್ ಪಾಲಿಕೆ ವತಿಯಿಂದ ಮಾಡಲಾಗಿತ್ತು. ಆದರೆ ಈ ಈ ನಾಲ್ಕು ಪ್ಯಾಕೇಜ್ ಕೂಡಾ ಅವೈಜ್ಞಾನಿಕವಾಗಿದೆ. ಇದನ್ನು ವಿರೋಧಿಸುವುದಾಗಿ ಪ್ರತಿಪಕ್ಷದ ನಾಯಕರಾದ ಪ್ರವೀಣ್ ಚಂದ್ರ ಆಳ್ವ ಅವರು ಸಭೆಯ ಆರಂಭದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದರು.
ಜಾತ್ರೋತ್ಸವ ಸಂದರ್ಭ ತ್ಯಾಜ್ಯ ವಿಲೇಗೆ ಸಂಬಂಧಿಸಿ ಹೊಸ ಟೆಂಡರ್‌ನಲ್ಲಿ ವ್ಯವಸ್ಥೆ ಇಲ್ಲ. ಈಗಾಗಲೇ ಖರೀದಿ ಮಾಡಲಾದ ವಾಹನಗಳು ಪಾಲಿಕೆಯ ಶೇ. 50ರಷ್ಟು ಎತ್ತರದ ರಸ್ತೆಗಳಲ್ಲಿ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಪ್ರೇಮಾನಂದ ಶೆಟ್ಟಿ ವಿರೋಧ ವ್ಯಕ್ತಪಡಿಸಿದರು.
ಸದಸ್ಯ ವಿನಯರಾಜ್‌ರವರು ಆಕ್ಷೇಪಿಸಿ, ಈಗಾಗಲೇ 17.25 ಕೋಟಿ ರೂ. ವೆಚ್ಚದಲ್ಲಿ ಕರೆಯಲಾಗಿರುವ ಟೆಂಡರ್‌ನಲ್ಲಿ ಯಾಂತ್ರಿಕ ರಸ್ತೆ ಸ್ವಚ್ಛತೆ, ಗಿಡಗಂಟಿಗಳ ಕಟ್ಟಿಂಗ್, ಸುರಕ್ಷತಾ ಯಂತ್ರಗಳನ್ನು ಸೇರಿಸಿಲ್ಲ. ಹಿಂದಿನ ವ್ಯವಸ್ಥೆಯಡಿ 7 ವರ್ಷ ಗಳ ಅವಧಿಗೆ ಗುತ್ತಿಗೆ ನೀಡಲಾಗಿದ್ದರೆ, ಹೊಸ ಟೆಂಡರ್ ಒಂದು ವರ್ಷದ ಅವಧಿಗೆ ನೀಡಲಾಗಿದೆ. ಆರಂಭದ ಒಂದು ವರ್ಷ ಈಗಾಗಲೇ ಸ್ವಚ್ಛ ಭಾರತ್ ಮಿಶನ್‌ನಡಿ ಖರೀದಿಸಲಾಗಿರುವ ಸ್ವಚ್ಛತಾ ವಾಹನಗಳಿಗೆ ಇನ್ಸೂರೆನ್ಸ್, ನಿರ್ವಹಣೆ ಸಮಸ್ಯೆ ಇರದು. ಬಳಿಕ ಅದರ ಹೊರೆಯೂ ಪಾಲಿಕೆಗೆ ಬೀಳಲಿದೆ ಎಂದರು.
ಮುಖ್ಯ ಸಚೇತಕ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ಅನಿಲ್ ಕುಮಾರ್, ಶಶಿಧರ ಹೆಗ್ಡೆ ಸೇರಿದಂತೆ ಸದಸ್ಯರ ನೇಕರು ಹೊಸ ಟೆಂಡರ್ ವ್ಯವಸ್ಥೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭ ಮೇಯರ್ ಅವರು ಈ ಟೆಂಡರ್ ರದ್ದುಪಡಿಸುವ ನಿರ್ಣಯ ಕೈಗೊಂಡರಲ್ಲದೆ, ಏಳು ವರ್ಷಗಳ ಗುತ್ತಿಗೆ ಯೊಂದಿಗೆ ಹೊಸ ಡಿಪಿಆರ್‌ಗೆ ಮಂಜೂರಾತಿ ಪಡೆದುಕೊಂಡು ಸರಕಾರಕ್ಕೆ ಕಳುಹಿಸುವ ನಿರ್ಧಾರ ಕೈಗೊಂಡರು.
ಸ್ಥಾಯಿ ಸಮಿತಿ ಪರಿಶೀಲನೆ ಬಳಿಕ 112ಸಿಯಡಿ ಡೋರ್‌ನಂಬರ್
ನಗರದಲ್ಲಿ ವಸತಿ ಸಮುಚ್ಛಯಗಳ ಬೇಸ್‌ಮೆಂಟ್‌ಗಳಲ್ಲಿ ಅಂಗಡಿಗಳನ್ನು ಮಾಡಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ 112 ಸಿಯಡಿ ಡೋರ್ ನಂಬರ್‌ಗೆ ಸಂಬಂಧಿಸಿದ ಕಡತ ತೆರಿಗೆ ಹಣಕಾಸು ಸ್ಥಾಯಿ ಸಮಿತಿಗೆ ಮಂಡಿಸಿ ಅಧ್ಯಕ್ಷರು, ಸದಸ್ಯರು ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಡೋರ್‌ನಂಬರ್ ಒದಗಿಸಬೇಕು ಎಂದು ಮೇಯರ್ ಸುಧೀರ್ ಶೆಟ್ಟಿ ನಿರ್ಣಯ ಪ್ರಕಟಿಸಿದರು.
ಪಾಲಿಕೆ ಸದಸ್ಯರಿಗೆ ತಲಾ 75 ಲಕ್ಷ ರೂ. ಅನುದಾನ ಘೋಷಣೆ
ಪಾಲಿಕೆ ಸದಸ್ಯರಿಗೆ ತಲಾ 25 ಲಕ್ಷ ರೂ. ಅನುದಾನದಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಅದನ್ನು 75 ಲಕ್ಷ ರೂ. ಗಳಿಗೆ ಏರಿಕೆ ಮಾಡಬೇಕು ಎಂದು ಜಗದೀಶ್ ಶೆಟ್ಟಿ ಆಗ್ರಹಿಸಿದರೆ, ನನ್ನ ವಾರ್ಡ್‌ನ ಹಿಂದಿನ ಬಜೆಟ್‌ನ ಕಡತವೇ ಕಳೆದು ಹೋಗಿದೆ ಎಂಬ ಹೇಳಿಕೆ ಅಧಿಕಾರಿಗಳಿಂದ ಬಂದಿದೆ. ಹೀಗೆ ಆದರೆ ನಾವು ಅಭಿವೃದ್ಧಿ ಕೆಲಸ ಮಾಡುವುದು ಹೇದೆ ಎಂದು ಸದಸ್ಯರಾದ ಸಂಶುದ್ದೀನ್ ಸಭೆಯ ಗಮನ ಸೆಳೆದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರತಿ ಸದಸ್ಯರಿಗೆ ತಲಾ 75 ಲಕ್ಷ ರೂ. ಅನುದಾನ ಘೋಷಣೆ ಮಾಡುವುದಾಗಿ ಹೇಳಿದರಲ್ಲದೆ, ಸದಸ್ಯರು ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿ ತಕ್ಷಣ ಕಳುಹಿಸಬೇಕು. ಮುಂದಿನ ಸಭೆಯೊಳಗೆ ಮಂಜೂರು ಆಗಿ ಸಮಿತಿಗೆ ಬರಬೇಕು ಎಂದು ಹೇಳಿದರು.
ಸಭೆಯಲ್ಲಿ ಉಪ ಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್, ಗಣೇಶ್ ಕುಮಾರ್, ಭರತ್ ಕುಮಾರ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಉಪಸ್ಥಿತರಿದ್ದರು.
ಬಂದರು, ಜಪ್ಪು, ಲೇಡಿಹಿಲ್, ಕಸಬಾ ಬೆಂಗ್ರೆಯಲ್ಲಿ ಅಧಿಕ ಡೆಂಗಿ ಪ್ರಕರಣಗಳು
ನಗರದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕ ಸೃಷ್ಟಿಸುತ್ತಿದೆ. 10 ವರ್ಷಗಳ ಹಿಂದೆ ನಗರದಲ್ಲಿ ಮಲೇರಿಯಾ ಜನ ರನ್ನು ಕಾಡಿದ್ದರೆ, ಕಳೆದೆರಡು ವರ್ಷಗಳಿಂದ ಅದು ನಿಯಂತ್ರಣದಲ್ಲಿದೆ. ಪ್ರಸ್ತುತ ಡೆಂಗಿ ನಿರ್ಮೂಲನೆಗೂ ಕ್ರಮ ಆಗಬೇಕಾ ಗಿದೆ ಎಂದು ಶಶಿಧರ ಹೆಗ್ಡೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ದ.ಕ. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಅವರು ಮಾತನಾಡಿ, ದ.ಕ. ಜಿಲ್ಲೆಯಲ್ಲಿ 232 ಖಚಿತ ಡೆಂಗಿ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 139 ಪ್ರಕರಣಗಳು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಕಂಡುಬಂದಿವೆ. ಉಳಿದಂತೆ ಮನಪಾ ವ್ಯಾಪ್ತಿಯಲ್ಲಿ 645 ಸಂಶಯಿತ ಡೆಂಗಿ ಪ್ರಕರಣಗಳು ವರದಿಯಾಗಿವೆ. ಬಂದರು, ಜಪ್ಪು, ಲೇಡಿಹಿಲ್, ಕಸಬಾ ಬೆಂಗ್ರೆ, ಎಕ್ಕೂರು ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ ಎಂದರು.
ಬಂದರು ವಾರ್ಡ್‌ನಲ್ಲಿ ಒಳಚರಂಡಿ ನೀರು ಕುಡಿಯುವ ನೀರಿನ ಪೈಪ್‌ಗಳಲ್ಲಿ ಹರಿಯುತ್ತಿದೆ. ಅಲ್ಲಿನ ಬಾವಿಗಳು ಕಲುಷಿತ ವಾಗಿವೆ. 3 ತಿಂಗಳಿನಿಂದ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುತ್ತಿದ್ದರೂ ಕ್ರಮವಾಗಿಲ್ಲ ಎಂದು ಸದಸ್ಯೆ ಝೀನತ್ ಅಸಮಾ ಧಾನ ವ್ಯಕ್ತಪಡಿಸಿದಾಗ, ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಸದಸ್ಯರಾದ ಲತೀಫ್ ಅವರೂ ದನಿಗೂಡಿಸಿದರು. ಕುಡ್ಸೆಂಪ್, ಸ್ಮಾರ್ಟ್ ಸಿಟಿ ಕಾಮಗಾರಿ ಎಂದು ಹೇಳುತ್ತಾ ಜನರನ್ನು ಅನಾರೋಗ್ಯಕ್ಕೆ ತಳ್ಳಲಾಗುತ್ತಿದೆ ಎಂದು ಲತೀಫ್ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಿನ ಒಳಚರಂಡಿ ಸಮಸ್ಯೆ ಯಾಕೆ ಬಗೆಹರಿಸಿಲ್ಲ ಎಂದು ಅಧಿಕಾರಿಗಳನ್ನು ಮೇಯರ್ ಪ್ರಶ್ನಿಸಿದಾಗ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಅದು ಕುಡ್ಸೆಂಪ್ ಕಾಮಗಾರಿ ಎಂದರು. ಕುಡ್ಸೆಂಪ್ ಅಧಿಕಾರಿ ಪ್ರತಿಕ್ರಿಯಿಸಿ ಅದಕ್ಕೆ ಮತ್ತೆ ಅಂದಾಜುಪಟ್ಟಿ ತಯಾರಿಸಿ ವೆಟ್‌ವೆಲ್‌ನೊಂದಿಗೆ ಕಾಮಗಾರಿ ಪೂರ್ಣಗೊಳಿಸಲು 17 ಕೋಟಿ ರೂ. ಅಗತ್ಯವಿದೆ ಎಂದು ಹೇಳಿದರು.