ಮಂಗಳೂರು| ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪ: ಐವರ ಬಂಧನ
ಸಿಸಿಬಿ ಪೊಲೀಸರ ಕಾರ್ಯಾಚರಣೆ
ಮಂಗಳೂರು, ಅ.1: ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಸಾಗಾಟ/ಮಾರಾಟ ಮಾಡುತ್ತಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು 70 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ಬಳಿ ಕಾರ್ಯಾಚರಣೆ ನಡೆಸಿದರು.
ಅದರಂತೆ ಮೂಲತಃ ಮಂಜೇಶ್ವರದ ಪ್ರಸಕ್ತ ಶಿವಮೊಗ್ಗ ಜಿಲ್ಲೆಯ ಟಿಪ್ಪುನಗರದ ಅಬ್ದುಲ್ ಶಾಕೀರ್ (24), ಕುಂಜತ್ತೂರು ಉದ್ಯಾವರದ ಹಸನ್ ಆಶೀರ್(34), ಕಣ್ಣೂರು ಜಿಲ್ಲೆಯ ಪಯ್ಯನೂರಿನ ರಿಯಾಝ್ ಎ.ಕೆ.(31), ವರ್ಕಾಡಿ ಪಾವೂರಿನ ನೌಷಾದ್ (22), ಕುಂಜತ್ತೂರಿನ ಯಾಸೀನ್ ಇಮ್ರಾಜ್ ಯಾನೆ ಇಂಬು (35) ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 3.50 ಲಕ್ಷ ರೂ. ಮೌಲ್ಯದ 70 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 5 ಮೊಬೈಲ್ ಫೋನ್‌ಗಳು, ನಗದು 1,460 ರೂ, ಡಿಜಿಟಲ್ ತೂಕಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 4,25,500 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಬೆಂಗಳೂರು ಮತ್ತಿತರ ಕಡೆಯಿಂದ ಎಂಡಿಎಂಎ ಖರೀದಿಸಿಕೊಂಡು ಕರ್ನಾಟಕ, ಕೇರಳ ರಾಜ್ಯದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದೆ. ಈ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಇವರು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಹಸನ್ ಅಶಿರ್ ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣ ದಾಖಲಾಗಿದೆ. ಯಾಸೀನ್ ಇಮ್ರಾಝ್ ಎಂಬಾತನ ವಿರುದ್ಧ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಾಗೂ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿರುತ್ತದೆ.
ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್‌ಸುಂದರ್ ಹೆಚ್.ಎಂ, ಎಸ್ಸೈ ಶರಣಪ್ಪಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯು ಪಾಲ್ಗೊಂಡಿದ್ದರು.