ಮಂಗಳೂರು: ಅನಂತನಾಗ್ 75 ನೇ ಹುಟ್ಟುಹಬ್ಬ ಆಚರಣೆ; 'ಅನಂತ ಅಭಿನಂದನೆ'ಗೆ ಅದ್ದೂರಿ ಚಾಲನೆ
ಅನಂತನಾಗ್ ದಂಪತಿಗಳಿಗೆ ಸಾರೋಟಿನಲ್ಲಿ ಮೆರವಣಿಗೆ
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅನಂತನಾಗ್ ಅಭಿನಂದನಾ ಸಮಿತಿ ವತಿಯಿಂದ ಅನಂತನಾಗ್ ಅವರ 75 ನೇ ವರ್ಷದ ಹುಟ್ಟುಹಬ್ಬಹಾಗೂ ವೃತ್ತಿಜೀವನದ 50 ನೇ ವರ್ಷದ ಸಂಭ್ರಮಾಚರಣೆ ಅನಂತ ಅಭಿನಂದನೆ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಭಾನುವಾರ ಅದ್ದೂರಿ ಚಾಲನೆ ನೀಡಲಾಯಿತು.
ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಪುತ್ಥಳಿಗೆ ಅನಂತನಾಗ್ ಅವರು ಹಾರಾರ್ಪಣೆ ಮಾಡಿ ಶ್ರೇಷ್ಠ ಶಿಕ್ಷಣ ಮತ್ತು ಬ್ಯಾಂಕಿಂಗ್ ತಜ್ಞನಿಗೆ ಗೌರವ ಸಲ್ಲಿಸಿದರು.
ಕೆನರಾ ಹೈಸ್ಕೂಲಿನ ಮುಂಭಾಗದಲ್ಲಿ ವಿಶೇಷವಾಗಿ ಸಿಂಗರಿಸಿದ ಸಾರೋಟಿನಲ್ಲಿ ಅನಂತನಾಗ್ ದಂಪತಿಗಳನ್ನು ಕುಳ್ಳಿರಿಸಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಟಿ ವಿ ರಮಣ್ ಪೈ ಸಭಾಂಗಣಕ್ಕೆ ಕರೆದುಕೊಂಡು ಬರಲಾಯಿತು. ದಾರಿಯುದ್ದಕ್ಕೂ ಹುಲಿವೇಷ ಕುಣಿತ, ಸ್ಯಾಕ್ಸೋಫೋನ್, ಬೊಂಬೆಗಳು, ಮಕ್ಕಳಿಂದ ಅನಂತನಾಗ್ ಸಿನೆಮಾ ಪಾತ್ರಗಳ ವೇಷಭೂಷಣ, ಬಾಜಾ ಭಜಂತ್ರಿಗಳ ಅಬ್ಬರದಲ್ಲಿ ಅನಂತನಾಗ್ ಅಭಿಮಾನಿಗಳು ಸಂಭ್ರಮಿಸಿದರು.
ಬೆಳಿಗ್ಗೆ ಶಾಸಕ ವೇದವ್ಯಾಸ ಕಾಮತ್ ಮುಂದಾಳತ್ವದಲ್ಲಿ ಅನಂತನಾಗ್ ಹಾಗೂ ಗಾಯತ್ರಿ ನಾಗ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಆ ಬಳಿಕ ನಡೆದ ಸಂವಾದದಲ್ಲಿ ಕಾಸರಗೋಡು ಚಿನ್ನಾ, ದಿನೇಶ್ ಮಂಗಳೂರು, ಲಕ್ಷ್ಮಣ್ ಕುಮಾರ್ ಮಲ್ಲೂರು, ಸದಾಶಿವ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಮನೋಹರ್ ಪ್ರಸಾದ್ ನಿರೂಪಿಸಿದರು.