ಮಂಗಳೂರು: ಮುಂದುವರಿದ ಟೈಗರ್ ಕಾರ್ಯಾಚರಣೆ; ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ
ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಆರಂಭಿಸಿದ ಬೀದಿಬದಿ ವ್ಯಾಪಾರಸ್ಥರು
ಮಂಗಳೂರು: ನಗರದ ಬೀದಿಬದಿ ವ್ಯಾಪಾರ ತೆರವು ಪ್ರಕ್ರಿಯೆ ಇಂದು ಕೂಡಾ ಮುಂದುವರಿದಿದ್ದು, ಇದನ್ನು ಖಂಡಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಲಿಕೆಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿರುವ ಆಕ್ರೋಶಿತ ಬೀದಿಬದಿ ವ್ಯಾಪಾರಿಗಳು ಧರಣಿ ಆರಂಭಿಸಿದ್ದಾರೆ.
ಟೈಗರ್ ಕಾರ್ಯಾಚರಣೆ ನಿಲ್ಲಿಸಬೇಕು ಮತ್ತು ಬೀದಿಬದಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸುತ್ತಿದ್ದಾರೆ. ಅನಧಿಕೃತ ಬೀದಿಬದಿ ವ್ಯಾಪಾರಿಗಳ ತೆರವು ನೆಪದಲ್ಲಿ ತಳ್ಳುಗಾಡಿ, ಗೂಡಂಗಡಿಗಳು, ಸಾಮಗ್ರಿಗಳಿಗೆ ಹಾನಿ ಮಾಡಿದ್ದಲ್ಲದೆ ಆಹಾರ, ತಿಂಡಿತಿನಿಸುಗಳನ್ನು ನಾಶಪಡಿಸಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರಣಿಗೆ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಮತ್ತಿತರರು ನೇತೃತ್ವ ನೀಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಮನಪಾ ಆಡಳಿತವು ನಡೆಸಿದ ದೌರ್ಜನ್ಯಕ್ಕೆ ಡಿವೈಎಫ್ಐ, ಸಿಐಟಿಯು ಸಂಘಟನೆ ಮತ್ತು ಸಿಪಿಎಂ ಪಕ್ಷವು ತೀವ್ರವಾಗಿ ಖಂಡಿಸಿದೆ.