ಮಂಗಳೂರು ದಸರಾ ಸಂದರ್ಭ ಮೂಲ ಸೌಕರ್ಯಕ್ಕೆ ಆದ್ಯತೆ: ವೇದವ್ಯಾಸ ಕಾಮತ್

ಮಂಗಳೂರು, ಅ.9: ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವ ನಮ್ಮ ಹೆಮ್ಮೆಯಾಗಿದ್ದು, ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಮೂಲಸೌಕರ್ಯಕ್ಕೆ ವಿಶೇಷ ಆದ್ಯತೆ ನೀಡಬೇಕಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರು ದಸರಾ ಪ್ರಯುಕ್ತ ನಗರದ ಕುದ್ರೋಳಿ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಶಾಸಕರು, ಮೇಯರ್ ಹಾಗೂ ದೇವಸ್ಥಾನಗಳ ಆಡಳಿತ ಸಮಿತಿ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮಂಗಳೂರು ದಸರಾ ಮಹೋತ್ಸವದ ರೂವಾರಿ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ನಗರದ ಕುದ್ರೋಳಿ ಗೋಕರ್ಣನಾಥ, ಭಗವತಿ ಕ್ಷೇತ್ರ, ರಥಬೀದಿ ವೆಂಕಟರಮಣ, ಮಂಗಳಾದೇವಿ, ಬೋಳಾರ ಮಾರಿಗುಡಿ, ಉರ್ವ ಮಾರಿಯಮ್ಮ ಹಾಗೂ ಇತರ ದೇವಸ್ಥಾನದ ರಸ್ತೆಗಳನ್ನು ಮನಪಾ ಆಡಳಿತದಿಂದ 1.30 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಪಾಲಂಕಾರಗೊಳಿಸಲು ನಿರ್ಧರಿಸಲಾಗಿದೆ. ಇದು ಮಾತ್ರವಲ್ಲದೆ ದಸರಾ ಉತ್ಸವ ಸಂದರ್ಭ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ನೈರ್ಮಲ್ಯ, ಶೌಚಾಲಯ ಸೇರಿದಂತೆ ಯಾವುದೇ ಸೌಕರ್ಯಗಳಿಗೆ ಕುಂದು ಬಾರದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಥಬೀದಿ ವೆಂಕಟರಮಣ, ಮಂಗಳಾದೇವಿ ದೇವಸ್ಥಾನದ ರಾಜಬೀದಿಯ ವಿದ್ಯುತ್ ಲೈಟ್ ಕಂಬದ ಮಾದರಿಯಲ್ಲೇ ಕುದ್ರೋಳಿ ದೇವಸ್ಥಾನದ ಪ್ರಧಾನ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ಕಂಬ, ಲೈಟ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಂಗಳೂರು ದಸರಾ ಮಹೋತ್ಸವ ವೈವಿಧ್ಯವನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಲ್ಲಿ ಹೊಸ ಯೋಜನೆಗಳೇನಾದರೂ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ದಸರಾ ಮಹೋತ್ಸವ ಸಂದರ್ಭ ಈಗಾಗಲೇ ಪಿಲಿ ನಲಿಕೆ, ಪಿಲಿ ಪರ್ಬ ಭಾರೀ ಆಕರ್ಷಣೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆ ರೂಪಿಸಲಾಗುವುದು ಎಂದರು.
ಈ ಸಂದರ್ಭ ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪ ಮೇಯರ್ ಸುನೀತಾ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಜಯಾನಂದ ಅಂಚನ್, ದಿವಾಕರ್ ಪಾಂಡೇಶ್ವರ, ಕಾರ್ಯಪಾಲಕ ಅಭಿಯಂತರ ನರೇಶ್, ಆರೋಗ್ಯ ವಿಭಾಗ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಅಭಿಷೇಕ್ ಉಪಸ್ಥಿತರಿದ್ದರು.
ಬಜೆಟ್ ನಲ್ಲೇ ಶಾಶ್ವತ ಅನುದಾನ: ಸುಧೀರ್ ಶೆಟ್ಟಿ
ಮಂಗಳೂರು ದಸರಾ ಮಹೋತ್ಸವ ವಿದ್ಯುದ್ದೀಪಾಲಂಕಾರಕ್ಕೆ ಮನಪಾದಿಂದ ಶಾಶ್ವತ ಅನುದಾನ ನೀಡುವ ನಿಟ್ಟಿನಲ್ಲಿ ಮುಂದಿನ ಬಜೆಟ್ನಲ್ಲೇ ಅನುದಾನ ಕಾಯ್ದಿರಿಸಲು ನಿರ್ಧರಿಸಲಾಗಿದೆ ಎಂದು ಮಂಗಳೂರು ಮನಪಾ ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.
ದಸರಾ ಮೆರವಣಿಗೆ ಹಾದು ಹೋಗುವ ರಸ್ತೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವುದರ ಜತೆಗೆ ಯಾವುದಾದರೂ ಕಾಮಗಾರಿ ಬಾಕಿಯಿದ್ದಲ್ಲಿ ತುರ್ತು ಮುಗಿಸಲು ಸೂಚನೆ ನೀಡಲಾಗಿದೆ. ಮಂಗಳೂರು ದಸರಾವನ್ನು ವೈಭವಯುತವಾಗಿ ಆಯೋಜಿಸಿ ಪ್ರವಾಸಿಗರ ಮತ್ತಷ್ಟು ಆಕರ್ಷಿಸುವ ಕೆಲಸ ಮಾಡೋಣ ಎಂದರು.
ಜಿಲ್ಲಾ ಉಸ್ತುವಾರಿಗಳ ನಿರ್ದೇಶನ: ಪ್ರವೀಣ್ ಚಂದ್ರ
ಮೈಸೂರು ದಸರಾ ಮಹೋತ್ಸವದಂತೆ ಮಂಗಳೂರು ದಸರಾ ಮಹೋತ್ಸವ ವೈಭವದಿಂದ ನಡೆಯಲಿದ್ದು, ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಬೇಕೆಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಂಗಳೂರು ದಸರಾ ಅದ್ದೂರಿಯಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ತಿಳಿಸಿದರು.