ಮಂಗಳೂರು: ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿನ ಸಮಾಜಶಾಸ್ತ್ರ ವಿಭಾಗ, ಸುಲಭ್ ಇಂಟರ್ನ್ಯಾಶನಲ್ ಸೋಶಿಯಲ್ ಸರ್ವಿಸ್ (ನವದೆಹಲಿ) ಮತ್ತು ಮಂಗಳೂರು ಸಮಾಜಶಾಸ್ತ್ರ ಸಂಘದ ವತಿಯಿಂದ 'ಹಿಂದುಳಿದ ವರ್ಗಗಳು, ನೈರ್ಮಲ್ಯ ಮತ್ತು ಸಾಮಾಜಿಕ ಅಭಿವೃದ್ಧಿ' ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯು ಶುಕ್ರವಾರ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.
ಐಎಸ್ಇಸಿಯ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಜಿ.ಕೆ. ಕಾರಂತ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ, ಇಂದಿನ ಆಧುನಿಕತೆಯಲ್ಲಿ ನೈರ್ಮಲ್ಯ ಮತ್ತು ಸಾಮಾಜಿಕ ಅಭಿವೃದ್ದಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜ ಇಂದು ಬದಲಾವಣೆಯಾಗಿದ್ದು ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಿದೆ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಸಮಾಜಶಾಸ್ತ್ರದ ಕೊಡುಗೆ ಅಪಾರ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನ ಮೌಲ್ಯ, ಶಿಕ್ಷಣ, ಮೂಲಭೂತ ಸೌಲಭ್ಯಗಳು ಸೇರಿದಂತೆ ಅನೇಕ ಅಂಶಗಳು ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಜಾತಿ ಹಾಗೂ ಔದ್ಯೋಗಿಕ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂತಹ ಸಮ್ಮೇಳನಗಳು ಭಾರತೀಯ ಸಮಾಜ, ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಮುನ್ನಡೆಯಲು ಸಹಕಾರಿಯಾಗುತ್ತದೆ. ಎರಡು ದಿನಗಳ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಸಂಯೋಜಕರಾದ ಪ್ರೊ.ರಿಚರ್ಡ್ ಪಾಯಸ್ , ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶು ಪಾಲೆ ಡಾ.ಅನುಸೂಯ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಗಾಯತ್ರಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ವಿನಯರಜತ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾದ ಡಾ.ಯೋಗೀಂದ್ರ ಬಿ.ವಂದಿಸಿದರು.
ಸಮ್ಮೇಳನದ ಭಾಗವಾಗಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಬಗ್ಗೆ ಗೋಷ್ಠಿ – ಸಂವಾದಗಳನ್ನು ನಡೆಸಿಕೊಟ್ಟರು.