ಮಂಗಳೂರು: ಬಸ್ ಪ್ರಯಾಣಿಕರ ತಂಗುದಾಣ ಕಾಣೆ!
ಮಂಗಳೂರು, ಆ.23: ನಗರದ ಹಂಪನಕಟ್ಟೆಯ ಪಿರೇರಾ ಹೋಟೆಲ್ ಮುಂಭಾಗದಲ್ಲಿದ್ದ ಬಸ್ ಪ್ರಯಾಣಿಕರ ತಂಗುದಾಣ ವೊಂದು ಕಾಣೆಯಾದ ಬಗ್ಗೆ ಸಾರ್ವಜನಿಕರು ದೂರಿಕೊಂಡಿದ್ದಾರೆ.
ಗುರುವಾರ ಇದ್ದ ಈ ತಂಗುದಾಣ ಶುಕ್ರವಾರ ಕಾಣೆಯಾಗಿದೆ. ಸಾಕಷ್ಟು ಸುಸಜ್ಜಿತವಾಗಿದ್ದ ಈ ತಂಗುದಾಣವು ಸುಗಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂಬ ಸಬೂಬು ನೀಡಿ ಕೆಡವಲಾಗಿದೆ ಎಂದು ಹೇಳಲಾಗುತ್ತಿದೆ.
ಸುಮಾರು ಎರಡು ದಶಕಗಳಿಂದಿದ್ದ ಈ ತಂಗುದಾಣವು ದಿಢೀರ್ ಹೇಗೆ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬಸ್ ನಿಲ್ದಾಣದ ಹಿಂದಿರುವ ಅಂಗಡಿಯ ಮಾಲಕನ ಕುಮ್ಮಕ್ಕಿನಿಂದ ರಾತ್ರೋರಾತ್ರಿ ಬಸ್ ಪ್ರಯಾಣಿಕರ ಆಶ್ರಯ ತಾಣ ವಾಗಿದ್ದ ಈ ತಂಗುದಾಣವನ್ನು ಕೆಡವಿ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಯಾರು ಕೆಡವಿದ್ದಾರೋ ಅಥವಾ ಕೆಡವಿಸಿದ್ದಾರೋ ಅವರಿಂದಲೇ ಪುನಃ ತಂಗುದಾಣ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Next Story