ಮಂಗಳೂರು: ಫೆಲೆಸ್ತೀನ್ ನಾಗರಿಕರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಫೆಲೆಸ್ತೀನ್ ನಾಗರೀಕರ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಸಿಪಿಎಂ-ಸಿಪಿಐ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.
ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವುದು ಯುದ್ಧ ಅಲ್ಲ ಅದು ಬರ್ಬರ ನರಮೇಧವಾಗಿದೆ. ಆದುದರಿಂದ ಕದನ ವಿರಾಮ ಜಾರಿಯಾಗಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ್ ಶೆಟ್ಟಿ ಅವರು ಒಂದು ವರ್ಷದಿಂದ ಇಸ್ರೇಲ್ ಫೆಲೆಸ್ತೀನ್ ಮೇಲೆ ಯುದ್ಧ ನಡೆಯುತ್ತಿದೆ. ಇಸ್ರೇಲ್ ನರಮೇಧದಿಂದ 48 ಸಾವಿರ ಮಂದಿ ಮೃತಪಟ್ಟಿದ್ದಾರೆ.16 ಸಾವಿರ ಮಂದಿ ಮಹಿಳೆಯರು ಬಲಿಯಾಗಿದ್ದಾರೆ. ಇಸ್ರೇಲ್‌ನ ಯುದ್ಧ ನೀತಿ ನಿಲ್ಲಬೇಕು. ಅಲ್ಲಿ ಶಾಂತಿ ನೆಲೆಸಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ಅವರು ಮಾತನಾಡಿ ಇಸ್ರೇಲ್-ಫೆಲೆಸ್ತೀನ್ ಯುದ್ಧ ನಿಲ್ಲಬೇಕು. ಅಮೆರಿಕದ ಅಣತಿಯಂತೆ ಇಸ್ರೇಲ್ ಯುದ್ಧ ಮಾಡುತ್ತಿದೆ. ವಿಶ್ವಸಂಸ್ಥೆಯಲ್ಲಿ ಯುದ್ಧದ ಬಗ್ಗೆ ಹಲವು ಬಾರಿ ಚರ್ಚೆಯಾಗಿ ದ್ದರೂ, ನಿರ್ಣಯವಾಗಿದ್ದರೂ ಫೆಲೆಸ್ತೀನ್ ವಿರುದ್ಧದ ಯುದ್ಧವನ್ನು ಇಸ್ರೇಲ್ ನಿಲ್ಲಿಸಲು ತಯಾರಿಲ್ಲ. ಇದು ಜಗತ್ತಿಗೆ ಅಪಾಯ ಕಾರಿ ಸಂದೇಶವಾಗಿದೆ. ಇದು ಮುಂದುವರಿದರೆ ಏನಾಗಬಹುದು ಎಂದು ಯೋಚಿಸಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸಿಪಿಐ ನಾಯಕರಾದ ಎಚ್.ವಿ.ರಾವ್ ಮಾತನಾಡಿ ಫೆಲೆಸ್ತೀನ್ ಮೇಲೆ ಇಸ್ರೇಲ್‌ನ ದಾಳಿಯನ್ನು ಖಂಡಿಸಿದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ, ವಸಂತ ಆಚಾರ್, ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಸಮಿತಿಯ ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗೇರು, ಕೃಷ್ಣಪ್ಪ ಸಾಲ್ಯಾನ್, ಸಿಪಿಐ ಪಕ್ಷದ ವಿ. ಕುಕ್ಯಾನ್, ಎಚ್.ವಿ.ರಾವ್, ಸೀತಾರಾಮ ಬೇರಿಂಜೆ, ಕರುಣಾಕರ ಮಾರಿಪಳ್ಳ, ಸುರೇಶ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
*ಧ್ವನಿವರ್ಧಕ ಬಳಸದೆ ಪ್ರತಿಭಟನೆ: ಫೆಲೆಸ್ತೀನ್‌ನಲ್ಲಿನ ಇಸ್ರೇಲ್ ನಡೆಸಿದ ನರಹತ್ಯೆಯನ್ನು ತಕ್ಷಣ ನಿಲ್ಲಿಸಿ ಕದನ ವಿರಾಮ ಘೋಷಿಸಿ ಗಾಝಾದ ಮರು ನಿರ್ಮಾಣ ಹಾಗೂ ಮಾನವೀಯ ನೆರವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಪಿಎಂ ಮತ್ತು ಸಿಪಿಐ ಪಕ್ಷಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು.
ಸಿಪಿಎಂ ಕಚೇರಿ ಕಾರ್ಯದರ್ಶಿ ನಾಗೇಶ್ ಕೋಟ್ಯಾನ್ ಅವರು ಪ್ರತಿಭಟನೆಗೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿಗೆ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ‘ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಉದ್ದೇಶಿತ ಪ್ರತಿಭಟನೆಯನ್ನು ನಡೆಸಲು ಮತ್ತು ಧ್ವನಿವರ್ಧಕ ಬಳಸಲು ಅನುಮತಿಯನ್ನು ನಿರಾಕರಿಸಲಾಗಿದೆ. ಒಂದು ವೇಳೆ ಪ್ರತಿಭಟನೆ ನಡೆಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿ ಹಿಂಬರಹ ನೀಡಿದ್ದರು.
ಆದರೆ ಪ್ರತಿಭಟನೆ ನಡೆಸುವ ನಿರ್ಧಾರದಿಂದ ಹಿಂದೆ ಸರಿಯದ ಪ್ರತಿಭಟನೆಕಾರರು ಧ್ವನಿವರ್ದಕ ಬಳಸಲು ಪೊಲೀಸ್ ಇಲಾಖೆಯ ಅನುಮತಿ ಇಲ್ಲದ ಕಾರಣ ಧ್ವನಿವರ್ಧಕ ಬಳಸದೆ ಪ್ರತಿಭಟನೆ ನಡೆಸಿದರು.