ಮಂಗಳೂರು| ಮಹಿಳೆಯ ಕೊಲೆ ಪ್ರಕರಣ: ಮೂವರ ಆರೋಪ ಸಾಬೀತು
ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದ ನ್ಯಾಯಾಧೀಶರು
ಮಂಗಳೂರು, ಸೆ.13: ಐದು ವರ್ಷದ ಹಿಂದೆ ನಗರದಲ್ಲಿ ನಡೆದಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮೂವರ ಆರೋಪವು ಸಾಬೀತಾಗಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. ಶುಕ್ರವಾರ ಆದೇಶ ಹೊರಡಿಸಿದ್ದಾರೆ.
2019ರ ಮೇ 11ರಂದು ಫಂಡ್ (ಕುರಿಫಂಡ್) ಹಣದ ವಿಚಾರವಾಗಿ ನಡೆದಿದ್ದ ಈ ಕೊಲೆ ಪ್ರಕರಣವು ನಗರವನ್ನು ತಲ್ಲಣ ಗೊಳಿಸಿತ್ತು. ಆರೋಪಿ ದಂಪತಿಯು ತನ್ನ ಮನೆಯಲ್ಲಿಯೇ ಶ್ರೀಮತಿ ಶೆಟ್ಟಿಯನ್ನು ಕೊಂದು ಮೃತದೇಹವನ್ನು 29 ತಂಡು ಗಳನ್ನಾಗಿ ಮಾಡಿ ನಗರದ ಹಲವು ಕಡೆಗಳಲ್ಲಿ ಬಿಸಾಡಿರುವುದಾಗಿ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ ಆಲಿಯಾಸ್ ಜಾನ್ಸ್ ಜೌಲಿನ್ ಸ್ಯಾಮ್ಸನ್ (40), ವಿಕ್ಟೋರಿಯಾ ಮಥಾಯಿಸ್ (47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಶಿಕ್ಷೆಗೊಳಗಾದ ಆರೋಪಿ ಗಳಾಗಿದ್ದಾರೆ. ಈ ಪೈಕಿ ರಾಜು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ.
ನಗರದ ಅತ್ತಾವರ ನಿವಾಸಿಯಾದ ಶ್ರೀಮತಿ ಶೆಟ್ಟಿ (42) ಅತ್ತಾವರದಲ್ಲೇ ಶ್ರೀ ಪೊಳಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅಲ್ಲದೆ ಕುರಿಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದರು. ಈ ಕುರಿಫಂಡ್‌ನಲ್ಲಿ ಜೋನಸ್ 2 ಸದಸ್ಯತ್ವವನ್ನು ಹೊಂದಿದ್ದು, ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಮಾಸಿಕ ಕಂತುಗಳ ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
2019ರ ಮೇ 11ರಂದು ಬೆಳಗ್ಗೆ 9:15ಕ್ಕೆ ಹಣ ಕೇಳುವುದಕ್ಕಾಗಿ ಆರೋಪಿ ಜೋನಸ್‌ನ ಮನೆಗೆ ಶ್ರೀಮತಿ ಶೆಟ್ಟಿ ತೆರಳಿ ದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ಜೋನಸ್ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿಯ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿಯನ್ನು ಜೋನಸ್ ಮತ್ತಾತನ ಪತ್ನಿ ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಹರಿತವಾದ ಕತ್ತಿಯಿಂದ ಕುತ್ತಿಗೆಯನ್ನು ಕೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ರುಂಡ, ಕೈ, ಕಾಲು ಹಾಗೂ ಇತರ ಭಾಗಗಳನ್ನು 29 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು. ಶ್ರೀಮತಿ ಶೆಟ್ಟಿಯ ವ್ಯಾನಿಟಿ ಬ್ಯಾಗ್ ಮತ್ತು ಚಪ್ಪಲಿಯನ್ನು ಆರೋಪಿಗಳು ಮನೆಯಲ್ಲಿ ಸುಟ್ಟು ಹಾಕಿದ್ದರು.
ಕೃತ್ಯ ನಡೆದ ಮೂರು ದಿನದ ಬಳಿಕ ನಗರದ ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ನಂತರ ಈ ಕೊಲೆ ಪ್ರಕರಣವು ಬೆಳಕಿಗೆ ಬಂದಿತ್ತು. ನಂತರ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿದ್ದವು.
ಈ ಪ್ರಕರಣದಲ್ಲಿ ರಾಜು ಕೂಡ ಸಹಕರಿಸಿದ್ದ. ಈ ಬಗ್ಗೆ ಕದ್ರಿ ಠಾಣೆಯ ನಿರೀಕ್ಷಕ ಮಹೇಶ್ ಎಂ. ತನಿಖೆ ಕೈಗೊಂಡಿದ್ದರು. ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ. ಜಗದೀಶ್ ರಾವ್ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು.
ಇನ್ಸ್‌ಪೆಕ್ಟರ್ ಶಾಂತಾರಾಂ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. 48 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದರು. 141 ದಾಖಲೆಗಳನ್ನು ಗುರುತಿಸಲಾಗಿತ್ತು.
ಜೋನಸ್ ಮತ್ತು ವಿಕ್ಟೋರಿಯಾ ವಿರುದ್ಧ ಕೊಲೆ, ಸುಲಿಗೆ ಮತ್ತು ಸಾಕ್ಷ್ಯನಾಶ ಹಾಗೂ ರಾಜು ವಿರುದ್ಧ ಕೊಲೆಗೆ ಸಹಾಯ, ಕಳವು ಮಾಡಿರುವ ಸೊತ್ತುಗಳನ್ನು ಇಟ್ಟುಕೊಂಡಿರುವ ಆರೋಪಗಳು ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸೆ.17ಕ್ಕೆ ಘೋಷಿಸುವುದಾಗಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು.
*ಆರೋಪಿ ಜೋನಸ್ ಹಂದಿ ಮಾಂಸದ ಕೆಲಸ ಮಾಡುತ್ತಿದ್ದ. ಅಲ್ಲದೆ ಸಂಬಂಧಿಕರ ಹತ್ಯೆಯ ಪ್ರಕರಣದ ಆರೋಪಿಯೂ ಆಗಿದ್ದ. ಫಾಸ್ಟ್‌ಫುಡ್ ಅಂಗಡಿಯೊಂದನ್ನು ಕೂಡ ನಡೆಸುತ್ತಿದ್ದ. ಮನೆಯಲ್ಲಿ ಜೋನಸ್ ಮತ್ತು ವಿಕ್ಟೋರಿಯಾ ಮಾತ್ರ ನೆಲೆಸುತ್ತಿದ್ದರು. ಇನ್ನೋರ್ವ ಆರೋಪಿ ರಾಜು ಎಂಬಾತ ಜೋನಸ್‌ನ ಗೆಳೆಯನಾಗಿದ್ದು, ಆತನಿಗೆ ಕೊಲೆಯ ವಿಚಾರ ತಿಳಿಸಿ ಶ್ರೀಮತಿ ಶೆಟ್ಟಿಯ ಕೆಲವು ಆಭರಣಗಳನ್ನು ಕೂಡಾ ಆತನಿಗೂ ನೀಡಿದ್ದ. ಇದಕ್ಕೆ ಪ್ರತಿಯಾಗಿ ರಾಜು ಇಬ್ಬರು ಆರೋಪಿಗಳು ಒಂದು ದಿನ ತನ್ನ ಮನೆಯಲ್ಲಿ ಉಳಿದುಕೊಳ್ಳಲು ಆಶ್ರಯ ನೀಡಿದ್ದ.
*ಆತ್ಮಹತ್ಯೆಗೆ ಯತ್ನಿಸಿದ್ದ: ಹೆಲ್ಮೆಟ್‌ನೊಳಗೆ ರುಂಡವನ್ನಿಟ್ಟು ಕೆಪಿಟಿ ಬಳಿಯ ಅಂಗಡಿಯಲ್ಲಿ ಹೋಗುವ ದೃಶ್ಯವನ್ನು ಸಿಸಿ ಕ್ಯಾಮರಾದಲ್ಲಿ ಸೆರೆಯಾದುದರ ಆಧಾರದ ಮೇಲೆ ತನಿಖೆ ನಡೆಸಿದ್ದ ಕದ್ರಿ ಪೊಲೀಸರು ಶ್ರೀಮತಿ ಶೆಟ್ಟಿಯೊಂದಿಗೆ ಹಣಕಾಸು ವ್ಯವಹಾರ ನಡೆಸುತ್ತಿದ್ದವರ ವಿಚಾರಣೆಗೊಳಪಡಿಸಿದರು. ಆವಾಗ ಜೋನಸ್ ಕೂಡ ಈಕೆಯೊಂದಿಗೆ ಹಣಕಾಸು ವ್ಯವಹಾರ ನಡೆಸುತ್ತಿದ್ದುದು ಬೆಳಕಿಗೆ ಬಂದಿತ್ತು. ಅದರಂತೆ ವೆಲೆನ್ಸಿಯಾ-ಸೂಟರ್‌ಪೇಟೆಯಲ್ಲಿರುವ ಆತನ ಮನೆಗೆ ಪೊಲೀಸರು ದಾಳಿ ಮಾಡಿದಾಗ ಜೋನಸ್ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಪೊಲೀಸರು ಆರೋಪಿಯನ್ನು ಅಪಾಯದಿಂದ ಪಾರು ಮಾಡಿ ಆಸ್ಪತ್ರೆಯಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ಚಿಕಿತ್ಸೆ ಕೊಡಿಸಿದ್ದರು.