ಬೆಳ್ತಂಗಡಿ | ಹತ್ತನೇ ವಯಸ್ಸಿಗೆ ಕಸಿ ಕಟ್ಟುವ ಪೋರ!
ಅಪ್ಪನಂತೆಯೇ ತಾನೂ ಕೃಷಿ ಮಾಡುತ್ತೇನೆ ಎನ್ನುವ ಆದ್ಯ ಶರ್ಮಾ ಬಳಂಜ
ಮಂಗಳೂರು : ಶಾಲೆಯಲ್ಲಿ ಕೊಟ್ಟ ಹೋಮ್ ವರ್ಕ್ ಮಾಡಿದ ಮೇಲೆ ಎಲ್ಲ ಮಕ್ಕಳಿಗೆ ಆಟ ಆಡುವುದು ಇಷ್ಟವಾದರೆ, ಈ ಹುಡುಗನಿಗೆ ಕೃಷಿ ಕೆಲಸ ಮಾಡುವುದು ಬಲು ಪ್ರೀತಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಕೃಷಿಕ ಅನಿಲ್ ಬಳಂಜ ಮತ್ತು ಶೈಲಜ ಬಳಂಜ ದಂಪತಿಗಳ ಪುತ್ರ ಆದ್ಯ ಶರ್ಮಾ ಕಸಿ ಕಟ್ಟು(ಗ್ರಾಫ್ಟಿಂಗ್)ವುದರಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಹಣ್ಣಿನ ಕಸಿ (ಗ್ರಾಫ್ಟಿಂಗ್) ಮಾಡುವ ವಿಧಾನವನ್ನು ವಿವರವಾಗಿ ಮಾಡಿ ತೋರಿಸುವ ಅವರಿಗೆ ಕೇವಲ ಹತ್ತು ವರ್ಷ ವಯಸ್ಸು. ನಾನು ದೊಡ್ಡವನಾದ ಮೇಲೆ ಮೇಲೆ ಕೃಷಿಯನ್ನೇ ಮಾಡುತ್ತೇನೆ, ನನಗೆ ಕೃಷಿ ಯಲ್ಲಿ ಆಸಕ್ತಿ ಹೆಚ್ಚು ಎನ್ನುವ ಆದ್ಯ ಶರ್ಮಾ ತನ್ನ ವಯಸ್ಸಿನ ಮಕ್ಕಳ ಮಧ್ಯೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಕಸಿ ಕಟ್ಟುವ ವಿಧಾನವನ್ನು ಹೇಳಿಕೊಡುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಉಜಿರೆಯ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ, ಆದ್ಯ ಶರ್ಮಾ ಬಿಡುವಿನ ವೇಳೆಯಲ್ಲಿ ತಮ್ಮ ತಂದೆ ಅನಿಲ್ ಬಳಂಜ ಅವರ ನರ್ಸರಿಯಲ್ಲಿ ಸಮಯ ಕಳೆಯುತ್ತಾರೆ. ನರ್ಸರಿಯೊಳಗೆ ಕೈಗಾಡಿ ಚಲಾಯಿಸುವ ಅವರ ಕೃಷಿಯ ಆಸಕ್ತಿ ಮೆಚ್ಚುವಂಥದ್ದು.
ಅನಿಲ್ ಬಳಂಜ ಅವರ ನರ್ಸರಿ ವಿಶೇಷ ಗಿಡಗಳಿಗೆ ಹೆಸರುವಾಸಿ. ದೇಶ ವಿದೇಶಗಳಿಂದ ಗಿಡಗಳನ್ನು ತರಿಸುವ ಅವರು, ಕಸಿ ಕಟ್ಟಿ ಗಿಡ ಅಭಿವೃದ್ದಿಪಡಿಸಿ ಸ್ಥಳೀಯ ಮಾರುಕಟ್ಟೆಯನ್ನು ಕಟ್ಟಿಕೊಂಡಿದ್ದಾರೆ. ಅನಿಲ್ ಬಳಂಜ ಹೊರಗಡೆ ಹೋದರೆ, ಅವರ ನರ್ಸರಿಗೆ ಗ್ರಾಹಕರು ಬಂದರೆ ಅವರಿಗೆ ಬೇಕಾದ ಗಿಡಗಳನ್ನು ಆದ್ಯ ಶರ್ಮಾ ಅವರೇ ಕೊಡುತ್ತಾರೆ. ನರ್ಸರಿಯಲ್ಲಿರುವ 800 ಜಾತಿಯ ಎಲ್ಲಾ ಗಿಡಗಳ ಹೆಸರೂ ಆದ್ಯ ಅವರಿಗೆ ಗೊತ್ತು.
ಅನಿಲ್ ಅವರ ಕಸಿಕಟ್ಟುವ ಕಲೆ ಆದ್ಯ ಶರ್ಮಾ ಅವರಿಗೂ ಕರಗತವಾಗಿದೆ. ತಮ್ಮ ಎಂಟನೇ ವಯಸ್ಸಿಗೆ ಕಸಿ ಕಟ್ಟುವುದನ್ನು ಕಲಿತ ಆದ್ಯ ಅವರು, ಎರಡು ವರ್ಷಗಳಿಂದ ಕಸಿ ಕಟ್ಟುತ್ತಿದ್ದಾರೆ. ಎಳೆಯ ವಯಸ್ಸಿನಲ್ಲಿಯೇ ಕೃಷಿಯ ವಿಚಾರದಲ್ಲಿ ಆದ್ಯ ಶರ್ಮಾ ಅವರು ತೋರಿಸುವ ಅಪಾರ ಆಸಕ್ತಿಗೆ ಎಂಥವರೂ ನಾಚಲೇಬೇಕು.