ಮಂಗಳೂರು: ರಸ್ತೆ ಬದಿ ನಿಂತಿದ್ದವರಿಗೆ ಹಲ್ಲೆ ಪ್ರಕರಣ; ಮತ್ತೋರ್ವ ಆರೋಪಿ ಸೆರೆ
ಚಿನ್ನಪ್ಪ
ಮಂಗಳೂರು, ಆ. 21: ರಸ್ತೆ ಬದಿ ನಿಂತಿದ್ದವರಿಗೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಕಾನ ಕಟ್ಲ ಆಶ್ರಯ ಕಾಲನಿ ಕೊರಗಜ್ಜ ದೈವಸ್ಥಾನ ಬಳಿಯ ನಿವಾಸಿ ಚಿನ್ನಪ್ಪ ಯಾನೆ ಮುತ್ತು (18) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಶಾಂತ್ ಭಂಡಾರಿ ಹಾಗೂ ಬಸವರಾಜ್ ಎಂಬವರನ್ನು ಜು.17ರಂದು ಬಂಧಿಸಲಾಗಿತ್ತು. ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಜರ್ ಡಿ ಕೋಸ್ಟಾ ಎಂವರು ಪರಿಚಯದ ಶಾಹಿಲ್ ಎಂಬವರೊಂದಿಗೆ ಮಳೆ ಬಂದ ಕಾರಣ ಜನತಾ ಕಾಲನಿಗೆ ಹೋಗುವ ರಸ್ತೆ ಬದಿಯಲ್ಲಿರುವ ಪಾಳು ಬಿದ್ದ ಮನೆಯ ಬಳಿ ನಿಂತುಕೊಂಡಿದ್ದ ಸಮಯ ಆರೋಪಿಗಳಾದ ಪ್ರಶಾಂತ್ ಭಂಡಾರಿ, ಬಸವರಾಜ್ ಮತ್ತು ಚಿನ್ನಪ್ಪ ಸೇರಿದಂತೆ ಇತರರು ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪೈಕಿ ಪ್ರಶಾಂತ್ ಭಂಡಾರಿ ಮತ್ತು ಬಸವರಾಜ್ ನನ್ನು ಬಂಧಿಸಿದ್ದ ಪೊಲೀಸರು ರವಿವಾರ ಚಿನ್ನಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಚಿನ್ನಪ್ಪ ವಿರುದ್ಧ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲನಿಯ ಮಸೀದಿಗೆ ಕಲ್ಲೆಸೆದಿರುವ ಪ್ರಕರಣ ಮತ್ತು ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗೆ ಹಲ್ಲೆ ನಡೆಸಿರುವ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.