ಮಂಗಳೂರು: ಬಾಲಕಿಗೆ ಕೊಲೆ ಬೆದರಿಕೆ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ
ಮಂಗಳೂರು: ಬಾಲಕಿಯ ಮುಂದೆ ಅಶ್ಲೀಲವಾಗಿ ವರ್ತಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಡಗ ಕಜೆಕಾರು ಗ್ರಾಮದ ಹೈದರ್ (25) ಎಂಬಾತನಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೊ) ಎಫ್‌ಟಿಎಸ್‌ಸಿ -1ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 5 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2020ರ ಮೇ 30ರಂದು ಮಧ್ಯಾಹ್ನ 2:30ಕ್ಕೆ ಆರೋಪಿಯು ತನ್ನ ಮನೆಗೆ ಎರಡು ಕರುಗಳನ್ನು ಸಾಕಲು ತೆಗೆದುಕೊಂಡು ಹೋಗುತ್ತಿದ್ದಾಗ ಒಂದು ಕರು ಆಯಾಸವಾಗಿ ರಸ್ತೆಯಲ್ಲಿ ಬಿದ್ದಿತ್ತು. ಅದಕ್ಕೆ ನೀರು ಕುಡಿಸುವ ಉದ್ದೇಶದಿಂದ ಒಂದು ಬಕೆಟ್ ನೀರು ಕೊಡುವಂತೆ ಅಲ್ಲಿಯೇ ಪಕ್ಕದ ಮನೆಯ ಮುಂದೆ ನಿಂತಿದ್ದ ವ್ಯಕ್ತಿಯಲ್ಲಿ ಕೇಳಿದ್ದ. ಆ ವ್ಯಕ್ತಿಯು ತನ್ನ ಮಗಳ ಬಳಿ ಆತನಿಗೆ ನೀರು ಕೊಡುವಂತೆ ಸೂಚಿಸಿದ್ದು, ಅದರಂತೆ ಆಕೆ ಬಕೆಟ್‌ನಲ್ಲಿ ನೀರು ತುಂಬಿಸಿ ಕೊಟ್ಟಾಗ ಆರೋಪಿ ಹೈದರ್ 10 ರೂ. ತೋರಿಸಿದ್ದ. ಆಕೆ ಹಣ ತಿರಸ್ಕರಿಸಿದಾಗ ಆತ ಕೈ ಹಿಡಿದು ಎಳೆದು ಅಶ್ಲೀಲವಾಗಿ ವರ್ತಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸ್ಸೈ ಸೌಮ್ಯಾ ಜೆ. ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಧೀಶೆಯು ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 354ರ ಅಡಿ 1 ವರ್ಷ ಸಾಮಾನ್ಯ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿಗೆ 3 ತಿಂಗಳು ಸಾಮಾನ್ಯ ಸಜೆ, ಕಲಂ 506ರಡಿ 1 ವರ್ಷ ಸಾಮಾನ್ಯ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳು ಸಾಮಾನ್ಯ ಸಜೆ. ಪೊಕ್ಸೊ ಕಾಯ್ದೆ ಕಲಂ 10ರಡಿ 5 ವರ್ಷ ಸಾಮಾನ್ಯ ಸಜೆ ಮತ್ತು 15 ಸಾವಿರ ರೂ. ದಂಡ, ಒಂದು ವೇಳೆ ದಂಡ ತೆರಲು ವಿಫಲನಾದರೆ 6 ತಿಂಗಳು ಹೆಚ್ಚುವರಿ ಸಾಮಾನ್ಯ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.