ಮಂಗಳೂರು| ಮುಖ್ಯಮಂತ್ರಿಗೆ ಭಿತ್ತಿಪತ್ರ ಪ್ರದರ್ಶನಕ್ಕೆ ಯತ್ನ: ಡಿವೈಎಫ್ಐ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅಮಾನತಿಗೆ ಒತ್ತಾಯ
ಮಂಗಳೂರು: ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿವೈಎಫ್‌ನ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಭಿತ್ತಿಪತ್ರ ಪ್ರದರ್ಶಿಸಲು ತಯಾರಿ ನಡೆಸಿದ್ದ 18 ಮಂದಿಯನ್ನು ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರಿಂಗಾನ ಕಂಬಳಕ್ಕೆ ತೆರಳುವಾಗ ನಂತೂರು ಬಳಿ ಭಿತ್ತಿಪತ್ರ ಪ್ರದರ್ಶನ ನಡೆಸಲು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ನೇತೃತ್ವದಲ್ಲಿ ಡಿವೈಎಫ್‌ಐ ಕಾರ್ಯಕರ್ತರು ತೆರಳುತ್ತಿದ್ದಾಗ ಅವರನ್ನು ಪೊಲೀಸರು ತಡೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ವಾಹನದ ಮೂಲಕ ಬರುವ ವೇಳೆ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರಮುಖರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ರಿಝ್ವಾನ್ ಹರೇಕಳ, ಅಶ್ರಫ್ ಹರೇಕಳ, ಕೃಷ್ಣ ತಣ್ಣೀರುಬಾವಿ, ಯೋಗೀತ್ ಉಳ್ಳಾಲ, ರಝಾಕ್ ಮುಡಿಪು, ನೌಶದ್ ಕಣ್ಣೂರು, ಸಾದಿಕ್ ಮುಲ್ಕಿ, ನೌಶದ್ ಬಾವ ಪಂಜಿಮುಗೇರು ಹಾಗು ಮತ್ತಿತರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.