ಮಂಗಳೂರು| ಗ್ರಾಹಕ ಆತ್ಮಹತ್ಯೆಗೈದ ಪ್ರಕರಣ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸೆರೆ
ಮಂಗಳೂರು, ಡಿ.18: ಗ್ರಾಹಕನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಂಗಳೂರು ಕೆಥೋಲಿಕ್ ಕ್ರೆಡಿಟ್ ಕೋಆಪರೇಟಿವ್ (ಎಂಸಿಸಿ) ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೊ ಅವರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಎಂಸಿಸಿ ಬ್ಯಾಂಕ್ನಿಂದ ಸಾಲ ಪಡೆದಿದ್ದ ಪೆರ್ಮಂಕಿ ಗ್ರಾಮದ ಕುಟಿನ್ಹೋ ಪದವು ನಿವಾಸಿ ಮನೋಹರ್ ಪಿರೇರಾ (47) ಮಂಗಳವಾರ ಅಪರಾಹ್ನ 3:45ರಿಂದ 5 ಗಂಟೆಯ ಮಧ್ಯೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದರು. ಅದಕ್ಕೂ ಮುನ್ನ ಅವರು ತನ್ನ ಆತ್ಮಹತ್ಯೆಗೆ ಬ್ಯಾಂಕ್ ಅಧ್ಯಕ್ಷನೇ ಹೊಣೆ ಎಂಬುದಾಗಿ ಹೇಳಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಮನೋಹರ್ ಪಿರೇರಾ ತನ್ನ ಸಹೋದರ ಜೀವನ್ ಪಿರೇರಾ ಅವರೊಂದಿಗೆ ಕುಟಿನ್ಹೋ ಪದವಿನ ಮನೆಯಲ್ಲಿ ವಾಸವಾಗಿ ದ್ದರು. ಮನೋಹರ್ ಪಿರೇರಾ ಸುಮಾರು 10 ವರ್ಷಗಳ ಹಿಂದೆ ಎಂಸಿಸಿ ಬ್ಯಾಂಕ್ನಿಂದ ಸಾಲ ಪಡೆದು ಮನೆ ಖರೀದಿಸಿ ದ್ದರು. ಮನೋಹರ್ ಪಿರೇರಾರ ಅಣ್ಣ ಮೆಲ್ಕಮ್ ಪಿರೇರಾ ಸಾಲದ ಕಂತುಗಳನ್ನು ಪಾವತಿಸುತ್ತಿದ್ದರು. ಕೋವಿಡ್ ಸಂದರ್ಭ ಸಾಲ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಎರಡು ವರ್ಷಗಳ ಹಿಂದೆ ಈ ಮನೆಯನ್ನು ಬ್ಯಾಂಕ್ ಅಧಿಕಾರಿಗಳು ಜಫ್ತಿ ಮಾಡಿದ್ದರು. ಇದರಿಂದ ಮನೋಹರ್ ಪಿರೇರಾ ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿ ಎರಡು ಬಾರಿ ಹೃದಯಾಘಾತಕ್ಕೀಡಾಗಿದ್ದರು ಎನ್ನಲಾಗಿದೆ.
2023ರ ಫೆಬ್ರವರಿಯಲ್ಲಿ ಸಿಸ್ಟರ್ ಕ್ರಿಸ್ಟಿನ್ ಎಂಬವರು ಚಾರಿಟಿಯಿಂದ 15 ಲ.ರೂ.ಗಳನ್ನು ಮನೋಹರ್ ಪಿರೇರಾ ಅವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು. ಮನೋಹರ್ ಪಿರೇರಾ ಅವರು ಅನಿಲ್ ಲೋಬೊ ಅವರೊಂದಿಗೆ ಮಾತನಾಡಿ ಸೆಲ್ಫ್ ಚೆಕ್ ನೀಡಿದ್ದರು. ಬಳಿಕ ಜಪ್ತಿ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ಮರಳಿ ಪಡೆದಿದ್ದರು. ಈ ಮಧ್ಯೆ 15 ಲ.ರೂ.ಗಳಲ್ಲಿ 9 ಲ.ರೂ.ಗಳನ್ನು ಅನಿಲ್ ಲೋಬೊ ಸೆಲ್ಫ್ ಚೆಕ್ ವಿಥ್ಡ್ರಾ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಮನೋಹರ್ ಪಿರೇರಾ ಮಾನಸಿಕವಾಗಿ ನೊಂದು ಅನಾರೋಗ್ಯಕ್ಕೀಡಾಗಿದ್ದರು. ಅಲ್ಲದೆ ಮಂಗಳವಾರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವೀಡಿಯೋ ಸಂದೇಶ ಹಾಕಿ ಕೃತ್ಯಕ್ಕೆ ಕಾರಣವನ್ನು ತಿಳಿಸಿದ್ದರು.
ಮನೋಹರ್ ಪಿರೇರಾ ಅವರ ಸಹೋದರ ಜೀವನ್ ಪಿರೇರಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಬ್ಯಾಂಕ್ ಅಧ್ಯಕ್ಷರ ಸ್ಪಷ್ಟನೆ
ಸಾಮಾಜಿಕ ಜಾಲತಾಣಗಳಲ್ಲಿ ಎಂಸಿಸಿ ಬ್ಯಾಂಕಿನ ಅಧ್ಯಕ್ಷರ ಹೆಸರು ಬಳಸಿ ತಪ್ಪು ಸಂದೇಶ ಹರಿದಾಡಿಸಲಾಗುತ್ತಿದೆ. ವ್ಯಕ್ತಿಯೊಬ್ಬರು ಬ್ಯಾಂಕ್ನಿಂದ ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡದಿದ್ದ ಕಾರಣ ಕಾನೂನಿನ ಪ್ರಕಾರ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ಸಾಲಗಾರರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಸಾಲವನ್ನು ಮರು ಪಾವತಿ ನೀಡಲಾದ ಅವಕಾಶವನ್ನು ಕೂಡ ಬಳಸಿಕೊಂಡಿಲ್ಲ. ಸಾಲಗಾರರು ತನ್ನ ಉಳಿತಾಯ ಖಾತೆಯನ್ನು ವೈಯುಕ್ತಿಕ ನೆಲೆಯಲ್ಲಿ ವ್ಯವಹರಿಸುತ್ತಾ ಬಂದಿದ್ದಾರೆ. ಅದರಲ್ಲಿ ಯಾರೂ ಮಧ್ಯ ಪ್ರವೇಶಿಸಿರಿವುದಿಲ್ಲ. ಸಾಲಗಾರರು ವೈಯುಕ್ತಿಕ ಸಮಸ್ಯೆಯಿಂದ ಈ ಕೃತ್ಯವನ್ನು ಎಸಗಿದ್ದು, ಅನಾವಶ್ಯಕವಾಗಿ ಬ್ಯಾಂಕಿನ ಅಧ್ಯಕ್ಷರ ಹೆಸರನ್ನು ಬಳಸಿ ಅಧ್ಯಕ್ಷರ ಮತ್ತು ಬ್ಯಾಂಕಿನ ಹೆಸರು ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಸಾರ್ವಜನಿಕರು, ಬ್ಯಾಂಕಿನ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶಗಳಿಗೆ ಕಿವಿಕೊಡಬಾರದು ಎಂದು ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.