ಮಂಗಳೂರು| ಸೈಬರ್ ವಂಚನೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಜ.15: ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣದ ಆರೋಪಿಗಳಾದ ಕೇರಳ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ರಿಯಾಝ್ ಎಂ.ವಿ. (45) ಎಂಬವರನ್ನು ಬಂಧಿಸಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬ ವಾಟ್ಸ್‌ಆ್ಯಪ್ ಸಂದೇಶವನ್ನು ಗಮನಿಸಿದ ವ್ಯಕ್ತಿಯು ಹಂತ ಹಂತವಾಗಿ 77,96,322.08 ರೂ.ವನ್ನು ಪಾವತಿಸಿದ್ದರು. ಆದರೆ ಆರೋಪಿಗಳು ಲಾಭಾಂಶ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿಯು ಸೆನ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವ್ಯಕ್ತಿಯಿಂದ ಪಾವತಿಯಾಗಿದ್ದ ಹಣದ ವಿವರಕ್ಕೆ ಸಂಬಂಧಿಸಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ 26,27,114.4 ರೂ.ವರ್ಗಾವಣೆಯಾಗಿತ್ತು. ಬಳಿಕ ಈ ಖಾತೆಯಿಂದ ಉಮರ್ ವಲಿಯ ಪರಂಬತ್ ಎಂಬಾತನ ಬ್ಯಾಂಕ್ ಖಾತೆಗೆ 6 ಲಕ್ಷ ರೂ. ಪಾವತಿಯಾದುದು ಕಂಡು ಬಂತು. ತನಿಖೆ ಕೈಗೊಂಡಾಗ ರಿಯಾಝ್ ಎಂ.ವಿ. ಎಂಬಾತನು ಹಣವನ್ನು ವರ್ಗಾವಣೆ ಮಾಡಿಸಿದ್ದ. ಹೀಗೆ ಈ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸೆನ್ ಠಾಣಾಧಿಕಾರಿಯೂ ಆದ ಎಸಿಪಿ ರವೀಶ್ ನಾಯಕ ಮತ್ತು ಸೆನ್ ಠಾಣಾ ನಿರೀಕ್ಷಕ ಸತೀಶ್ ಎಂ.ಪಿ., ಎಸ್ಸೈ ಗುರಪ್ಪಕಾಂತಿ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.