ಮಂಗಳೂರು| ಜೋಡಿ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ನಗರದ ಅತ್ತಾವರದಲ್ಲಿ 2014ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೇರಳ ಕಾಸರಗೋಡಿನ ಚೆರ್ಕಳ ಎಂಬಲ್ಲಿನ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರದ ಇರ್ಷಾದ್ (24) ಹಾಗೂ ಸಫ್ವಾನ್ (24) ಶಿಕ್ಷೆಗೊಳಗಾದ ಆರೋಪಿಗಳು. ಇವರು ನಾಫೀರ್ ಮತ್ತು ಫಾಹಿಮ್ ಎಂಬವರನ್ನು ಕೊಲೆಗೈದಿದ್ದರು.
ನಾಫೀರ್ ಮತ್ತು ಫಾಹಿಮ್ ಗೆಳೆಯರಾಗಿದ್ದರು. ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ತಂದಿದ್ದ. ಅವುಗಳನ್ನು ಮಾರಾಟ ಮಾಡಲು ಮೂವರು ಆರೋಪಿಗಳು ಸಹಕರಿಸಿದ್ದರು. ಚಿನ್ನ ಮಾರಾಟ ಮಾಡಿ ಬಂದ ಹಣದ ವಿಚಾರದಲ್ಲಿ ನಫೀರ್ ಮತ್ತು ಫಾಹಿಮ್ ತಕರಾರು ಮಾಡಿದರು ಎಂಬ ದ್ವೇಷದಿಂದ ಮೂವರು ಆರೋಪಿಗಳು ಸೇರಿ 2014ರ ಜು.1ರಂದು ಕೊಲೆ ಮಾಡಿದ್ದರು.
ಕೊಲೆ ಮಾಡಿ ಶವಗಳನ್ನು ಹೂತು ಹಾಕುವ ಉದ್ದೇಶದಿಂದ ಆರೋಪಿಗಳು ಕಾಸರಗೋಡಿನ ಬೇಡಡ್ಕ ಎಂಬಲ್ಲಿ 10 ಸೆಂಟ್ಸ್ ಜಾಗವನ್ನು 2014ರ ಮೇ 15ರಂದು ಖರೀದಿಸಿದ್ದರು. 3ನೇ ಆರೋಪಿ ಸಫ್ಘಾನ್ ಹೆಸರಿಗೆ ಈ ಜಮೀನನ್ನು ನೊಂದಣಿ ಮಾಡಿಸಿಕೊಂಡಿದ್ದರು. ಶವ ಹೂಳಲು ದೊಡ್ಡ ಹೊಂಡವನ್ನೂ ಕೂಡ ತೆಗೆದಿಟ್ಟಿದ್ದರು. ಜೂ.16ರಂದು ಮೂವರು ಆರೋಪಿಗಳು ನಗರದ ಅತ್ತಾವರದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲದೆ ಮರುದಿನ ನಫೀರ್ ಮತ್ತು ಫಾಹಿಮ್ ರನ್ನು ಅಲ್ಲಿಗೆ ಕರೆದೊಯ್ದು ಅವರೊಂದಿಗೆ ಗೆಳೆತನದ ನಾಟಕವಾಡಿ ವಾಸಿಸತೊಡಗಿದರು. 2014ರ ಜು.1ರಂದು ಮೂವರು ಸೇರಿ ಇಬ್ಬರನ್ನೂ ಕೊಲೆ ಮಾಡಿದ್ದರು.
ಅಂದಿನ ಠಾಣಾಧಿಕಾರಿ ದಿನಕರ್ ಶೆಟ್ಟಿ ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಮೂವರೂ ಆರೋಪಿಗಳನ್ನು ದೋಷಿಗಳೆಂದು ತಿಳಿಸಿತ್ತು. ಶನಿವಾರ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಇಬ್ಬರನ್ನು ಕೊಂದದಕ್ಕಾಗಿ ಮೂವರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾ ಸಜೆ, ಕಲಂ 120(ಬಿ) ಭಾ.ದಂ.ಸಂ. ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 3 ತಿಂಗಳ ಸಾದಾ ಸಜೆ, ಕಲಂ 201 ಭಾ.ದಂ.ಸಂ. ಅಡಿಯಲ್ಲಿ 3 ವರ್ಷ ಸಾದಾಸಜೆ ಮತ್ತು ತಲಾ 5,000 ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 2 ತಿಂಗಳ ಸಾದಾಸಜೆ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ರಾಜು ಪೂಜಾರಿ ಮತ್ತು ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.