ಮಂಗಳೂರು: ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ಆರೋಪದಲ್ಲಿ ಐದು ಮಂದಿ ಸೆರೆ
ಎರಡು ಪ್ರತ್ಯೇಕ ಪ್ರಕರಣ
ಮಂಗಳೂರು, ಅ.16: ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ ಆರೋಪದ ಮೇರೆಗೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಳುವಾಯಿ ಗ್ರಾಮದ ನವೀದ್ (30), ಪಡುಮಾರ್ನಾಡು ಗ್ರಾಮದ ಉಮೇಶ್ (40) ಮತ್ತು ಪ್ರಸಾದ್ ದೇವಾಡಿಗ (35) ಹಾಗೂ ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿನ ಸುಖೇಶ್ ಆಚಾರ್ಯ (33) ಪುತ್ತಿಗೆ ಗ್ರಾಮದ ಬವಸನಕಜೆ ಎಂಬಲ್ಲಿನ ಪಲಕಳ ಮನೆಯ ಪುರಂದರ ಕುಲಾಲ್ (38) ಎಂದು ಗುರುತಿಸಲಾಗಿದೆ.
*ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿನ ಎಸ್‌ಐ ಸ್ಪೋರ್ಟ್ಸ್ ಅಂಗಡಿಯ ಮುಂದೆ ನವೀದ್ ಎಂಬಾತನು ಪ್ರಸಾದ್ ಮತ್ತು ಉಮೇಶ್ ಎಂಬವರಿಂದ ಹಣವನ್ನು ಪಡೆದು ಅ.16ರಂದು ಸಂಜೆ 5:15ಕ್ಕೆ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ಎಂಬಲ್ಲಿನ ಕಡಲಕೆರೆ ಪಾರ್ಕ್‌ನಲ್ಲಿ ಅ.16ರಂದು ಸಂಜೆ 6ಕ್ಕೆ ಸುಖೇಶ್ ಆಚಾರ್ಯ ಎಂಬಾತನು ಪುರಂದರ್ ಕುಲಾಲ್ ಎಂಬಾತನಿಂದ ಹಣವನ್ನು ಪಡೆದು ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಕ್ರಿಕೆಟ್ ಮ್ಯಾಚ್‌ನಲ್ಲಿ ಬೆಟ್ಟಿಂಗ್ ಮಾಡಲು ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ಹಣವನ್ನು ಪಡೆದಿರುವುದಾಗಿ ಮತ್ತು ಈ ವೆಬ್‌ಸೈಟ್‌ನ್ನು ಮುಂಬೈನಲ್ಲಿರುವ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದಾನೆಂದು ನವೀದ್ ಮತ್ತು ಸುಖೇಶ್ ಆಚಾರ್ಯ ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ರ ಮಾರ್ಗದರ್ಶನ ಮತ್ತು ಡಿಸಿಪಿಗಳಾದ ಸಿದ್ದಾರ್ಥ ಗೊಯಲ್, ದಿನೇಶ್ ಕುಮಾರ್ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್‌ರ ನಿರ್ದೇಶನದಂತೆ ಮೂಡುಬಿದಿರೆ ಠಾಣೆಯ ನಿರೀಕ್ಷಕ ಸಂದೇಶ್ ಪಿ.ಜಿ., ಎಸ್ಸೈ ಸಿದ್ದಪ್ಪನರನೂರ, ಸಿಬ್ಬಂದಿಗಳಾದ ಚಂದ್ರಹಾಸ್ ರೈ, ಮುಹಮ್ಮದ್ ಹುಸೇನ್, ಅಖೀಲ್ ಅಹ್ಮದ್, ಪ್ರದೀಪ್ ಕುಮಾರ್, ಝೈದ್, ವೆಂಕಟೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.