ಮಂಗಳೂರು: 3 ತಿಂಗಳೊಳಗೆ ಸರ್ವಿಸ್ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ: ಮೇಯರ್ ಸುಧೀರ್ ಶೆಟ್ಟಿ
ಸರ್ವಿಸ್ ಬಸ್ ನಿಲ್ದಾಣಕ್ಕೆ ಮೇಯರ್, ಶಾಸಕರ ಭೇಟಿ
ಮಂಗಳೂರು, ಆ.28: ನಗರದ ಸ್ಟೇಟ್ಬ್ಯಾಂಕ್ನ ತಾತ್ಕಾಲಿಕ ಸರ್ವಿಸ್ ಬಸ್ಸು ನಿಲ್ದಾಣವನ್ನು ಸ್ಮಾರ್ಟ್ಗೊಳಿಸುವ ಮುಂದುವರಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳೊಳಗೆ ಮುಗಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಸರ್ವಿಸ್ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆಯ ಕುರಿತಂತೆ ಸಾರ್ವಜನಿಕರ ದೂರಿನ ಮೇರೆಗೆ ಶಾಸಕ ವೇದವ್ಯಾಸ ಕಾಮತ್ ಅವರ ಜತೆ ಪಾಲಿಕೆಯ ಉಪ ಮೇಯರ್, ಸ್ಥಾಯಿಸಮಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಸಿಟಿ ಹಾಗೂ ಸರ್ವಿಸ್ ಬಸ್ಸು ನಿಲ್ದಾಣದ ಬಗ್ಗೆ ಸಾಕಷ್ಟು ದೂರುಗಳು ಬಂದಿರುವುದರಿಂದ ಶಾಸಕರ ಜತೆ ಭೇಟಿ ನೀಡಿ ಪರಿಶೀಲಿಸಿದ್ದು, ಸಾಕಷ್ಟು ಸಮಸ್ಯೆ ಇದೆ. ಬಸ್ಸು ನಿಲ್ದಾಣದ ಮೇಲ್ಛಾವಣಿ, ಶೌಚಾಲಯ, ಸ್ಪೀಡ್ ಬ್ರೇಕರ್, ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಹಾಗೂ ಬೀದಿ ವ್ಯಾಪಾರಿಗಳ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು. ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯಿಂದ ಮುಂದುವರಿದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
‘ಹಲವಾರು ವರ್ಷಗಳ ಹಿಂದೆ ಇಲ್ಲಿ ಬಸ್ಸು ನಿಲ್ದಾಣವೇ ಇರಲಿಲ್ಲ. ಸ್ಮಾರ್ಟ್ ಸಿಟಿ ಹಾಗೂ ಮನಪಾದ ಮೂಲಕ ಇದಕ್ಕೊಂದು ಹೊಸ ರೂಪು ನೀಡಲು ನಿರ್ಧರಿಸಿ ಈಗಾಗಲೇ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಕಾಂಕ್ರಿಟೀಕರಣ ನಡೆದಿದೆ. ವ್ಯವಸ್ಥಿತವಾಗಿ ಮೇಲ್ಛಾವಣಿ, ಬಸ್ಸು ರೂಟ್ಗೆ ಸಂಬಂಧಿಸಿ ನಾಮಫಲಕ, ಶೌಚಾಲಯ, ಕ್ಯಾಂಟೀನ್, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಹಲವು ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಮುಂದುವರಿದ ಕಾಮಗಾರಿಗಾಗಿ ತಯಾರಿಸಲಾಗಿರುವ ಯೋಜನಾ ವರದಿಯ ಪ್ರಸ್ತಾವನೆಯನ್ನು ಮುಂದಿನ ಸ್ಮಾರ್ಟ್ ಸಿಟಿ ಸಭೆಯಲ್ಲಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಉಪ ಮೇಯರ್ ಸುನೀತಾ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್, ರೋಹಿತ್ ಅಮೀನ್, ವರುಣ್ ಚೌಟ, ದ.ಕ. ಜಿಲ್ಲಾ ಸಿಟಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಮಾಜಿ ಅಧ್ಯಕ್ಷ ದಿಲ್ರಾಜ್ ಆಳ್ವ, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ, ಮನಪಾ ಕಾರ್ಯನಿರ್ವಾಹಕ ಇಂಜಿನಿಯರ್ ನರೇಶ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ಹೊರಠಾಣೆ ಬೇಡಿಕೆ
ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಅನಧಿಕೃತ ಚಟುವಟಿಕೆಗೆ ಕಡಿವಾಣ ಹಾಗೂ ಎಲ್ಲೆಂದರಲ್ಲಿ ಬಹಿರ್ದೆಸೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಹೊರಠಾಣೆಯನ್ನು ಮಾಡುವ ಬಗ್ಗೆ ಬೇಡಿಕೆ ಬಂದಿದೆ ಎಂದು ಪರಿಶೀಲನೆಯ ಸಂದರ್ಭ ಮೇಯರ್ ಸುಧೀರ್ ಶೆಟ್ಟಿ ಗಮನ ಸೆಳೆದರು.
ಈ ಸಂದರ್ಭ ಉಪಸ್ಥಿತರಿದ್ದ ಡಿಸಿಪಿ ದಿನೇಶ್ ಕುಮಾರ್, ಅಗತ್ಯ ಸಿಬ್ಬಂದಿಯೊಂದಿಗೆ ಹೊರಠಾಣೆ ಒದಗಿಸಲು ಕ್ರಮ ವಹಿಸುವುದಾಗಿ ಹೇಳಿದರು.
ಬಸ್ ನಿಲ್ದಾಣ ನಿರ್ವಹಣೆ ಬಸ್ಸು ಮಾಲಕರ ಸಂಘಕ್ಕೆ
ಸರ್ವಿಸ್ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ನಿರ್ವಹಣೆಯನ್ನು ಬಸ್ಸು ಮಾಲಕರ ಸಂಘಕ್ಕೆ ನೀಡುವುದು, ನಿಲ್ದಾಣದ ಒಳಗಿರುವ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವುದು, ಸಣ್ಣ ಅಂಗಡಿಗಳಿಗೆ ದಿನಬಾಡಿಗೆ ನೀಡುವ ಚಿಂತನೆಯೂ ಇದ್ದು, ಆರೋಗ್ಯಾಧಿಕಾರಿ ನಿರಂತರ ಭೇಟಿ ನೀಡಿ ಪರಿಶೀಲನೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧಿಕಾರಿಗಳು, ಬಸ್ಸು ಮಾಲಕರ ಜತೆ ಮಾತುಕತೆಯ ವೇಳೆ ತಿಳಿಸಿದರು.
ಮನಪಾ ಮತ್ತು ಸ್ಮಾರ್ಟ್ ಸಿಟಿಯಿಂದ ಸುಮಾರು ಎರಡು ವರ್ಷಗಳ ಹಿಂದೆ ಸರ್ವಿಸ್ ಬಸ್ಸು ನಿಲ್ದಾಣದ ಅಭಿವೃದ್ಧಿ 4 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆ ಹಣದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಮಾತ್ರವೇ ನಡೆಸಲಾಗಿದೆ. ಉಳಿದಂತೆ ಮೇಲ್ಛಾವಣಿಯನ್ನು ಜಾಹೀರಾತು ನೀಡಲು ಬಯಸುವ ಸಂಸ್ಥೆಗಳ ಸಿಎಸ್ಆರ್ ನಿಧಿಯ ಮೂಲಕ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಮೋತಿಶಾಂ ಸಂಸ್ಥೆಯವರು ಮಾತ್ರವೇ ಈ ಬಗ್ಗೆ ಆಸಕ್ತಿ ತೋರಿಸಿ ಎರಡು ಮೇಲ್ಛಾವಣಿಗಳನ್ನು ತಲಾ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮಾಹಿತಿ ನೀಡಿದರು.
ಎಂಆರ್ಪಿಎಲ್ನಿಂದ ಮಾಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಅದರ ಪ್ರಸ್ತಾವನೆ ಸಿದ್ಧಗೊಂಡು ಅದು ಮಂಜೂರಾತಿ ಆಗುವಾಗ ಮತ್ತಷ್ಟು ವಿಳಂಬವಾಗಲಿದೆ. ಈಗಾಗಲೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕಾಗಿ ಸ್ಮಾರ್ಟ್ ಸಿಟಿಯಿಂದಲೇ ಇದನ್ನು ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚಿಸಿದರು.
ಸ್ಪೀಡ್ ಬ್ರೇಕರ್ಗೆ ಮಹಿಳೆಯ ಮನವಿ
ಸರ್ವಿಸ್ ಬಸ್ಸು ನಿಲ್ದಾಣದ ಪರಿಶೀಲನೆಗೆಂದು ಆಗಮಿಸಿದ್ದ ಡಿಸಿಪಿ ದಿನೇಶ್ ಕುಮಾರ್ ಅವರ ಬಳಿಗೆ ಪುತ್ರನ ಜತೆ ಆಗಮಿಸಿದ ಶಕುಂತಳಾ ಎಂಬವರು, ಸ್ಟೇಟ್ಬ್ಯಾಂಕ್ನ ಹಳೆ ಬಸ್ಸು ನಿಲ್ದಾಣದಲ್ಲಿ ಪ್ರಸ್ತುತ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುವುದರಿಂದ ರಸ್ತೆ ದಾಟುವುದೇ ಕಷ್ಟವಾಗುತ್ತಿದೆ. ಅಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕೆಂದು ಮನವಿ ಮಾಡಿದರು.
‘ಸ್ಮಾರ್ಟ್ಗೊಳ್ಳುತ್ತಿರುವ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಸಿಸಿ ಟಿವಿ ಅಳವಡಿಕೆ, ವೈಫೈ ಕೂಡಾ ನೀಡುವ ಚಿಂತಿನೆ ಇದೆ. ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಪೂರ್ಣ ಪ್ರಮಾಣದ ಸಹಕಾರ ನೀಡಲು ಕ್ರಮ. ರೂಪು ರೇಷೆ ಮಾಡಲಾಗಿತ್ತು. ಅದನ್ನು ಈಗಾಗಲೇ ಕಾಂಕ್ರಿಟೀಕರಣಕ್ಕೆ ಬಳಕೆ ಮಾಡಲಾಗಿದೆ. ರೂಫ್ಗೆ ಸಿಎಸ್ಆರ್ ಫಂಡ್ನಿಂದ ಯೋಜನೆ ರೂಪಿಸಲಾಗಿತ್ತು. ಈ ನಡುವೆ ಚುನಾವಣೆ ಬಂತು. ಚುನಾವಣೆ ಬಂದ ನಂತರ ಅದನ್ನು ವ್ಯವಸ್ಥಿತವಾಗಿ ರೂಪಿಸುವ ಕೆಲಸ ಆಗಿಲ್ಲ. ಜಿಲ್ಲಾಡಳಿತ, ಮನಪಾ, ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುವ ಕೆಲಸ ಮಾಡಬೇಕಿತ್ತು. ಇದೀಗ ಸಾರ್ವಜನಿಕರ ದೂರಿನ ಮೇರೆಗೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಾಗುವುದು.’
-ವೇದವ್ಯಾಸ ಕಾಮತ್, ಶಾಸಕರು.
‘ಅಂದಾಜು ಮತ್ತೆ 2 ಕೋಟಿ ರೂ. ವೆಚ್ಚದಲ್ಲಿ ಮುಂದುವರಿದ ಕಾಮಗಾರಿ ನಡೆಯಲಿದೆ. ಸಿಟಿ ಬಸ್ಸುಗಳು ನಿಲುಗಡೆ ಆಗುವಲ್ಲಿ ಸದ್ಯ ಯಾವುದೇ ಮೇಲ್ಛಾವಣಿ ಇಲ್ಲ. ಇದರಿಂದ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಮೊದಲು ಮೇಲ್ಛಾವಣಿ ನಿರ್ಮಾಣದ ಕಾಮಗಾರಿ ನಡೆಯಲಿದೆ. ಈ ನಿಲ್ದಾಣಕ್ಕೆ ಮಂಗಳೂರು ಸೆಂಟ್ರಲ್ ಬಸ್ಸು ನಿಲ್ದಾಣ ಎಂಬ ನಾಮಕರಣಕ್ಕೂ ಬೇಡಿಕೆ ಇದೆ.’
-ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್, ಮನಪಾ.
‘ಪ್ರತಿನಿತ್ಯ ಬಿಸಿಲಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಾ ನಿಂತು ಬಳಲುವುದನ್ನು ನೋಡುತ್ತಿರುತ್ತೇವೆ. ಕೆಲವರು ತಲೆತಿರುಗಿ ಬಿದ್ದಾಗ ನಾವು ಸಹಕರಿಸುತ್ತೇವೆ. ಈ ಮೀನು ಮಾರುಕಟ್ಟೆಯ ದಂಡೆಯಲ್ಲಿ ಬಸ್ಸಿಗಾಗಿ ಕಾದು ಕುಳಿತು ಬೀಳುವುದೂ ಇದೆ. ಇಷ್ಟು ಖರ್ಚು ಮಾಡಿದ ಮೇಲೆ ಇಲ್ಲಿ ಪ್ರಯಾಣಿಕರಿಗೂ ಸೂಕ್ತ ವ್ಯವಸ್ಥೆ ಆಗಬೇಕು.’
-ಗೌರಿ, ಮೀನುಗಾರ ಮಹಿಳೆ.