ಮಂಗಳೂರು | ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಖಾಝಿ, ಉಲಮಾಗಳ ಆಗ್ರಹ

ಮಂಗಳೂರು: ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ಭಾಗವಾಗಿ 2024ರ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಖಾಝಿಗಳಾದ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಝೈನುಲ್ ಉಲಮಾ ಮಾಣಿ ಉಸ್ತಾದ್ ಸಹಿತ ಪ್ರಮುಖ ಉಲಮಾಗಳು ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಶನಿವಾರ ನಗರದ ಹೊಟೇಲ್ ಸಭಾಂಗಣವೊಂದರಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು. ಆದರೆ ಪ್ರಸಕ್ತ ಸಮಿತಿಯು ವಿರೋಧ ಪಕ್ಷಗಳ ಪ್ರತಿನಿಧಿಗಳು ಸೂಚಿಸಿದ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಮೊದಲಿಗಿಂತಲೂ ಅಪಾಯಕಾರಿ ಅಂಶಗಳನ್ನು ಸೇರಿಸಿ ಮಂಡಿಸಿದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರವು ಹಿಂಪಡಯಬೇಕು ಎಂದು ಒತ್ತಾಯಿಸಿದರು.
ವಕ್ಫ್ ಎಂಬುದು ಅಲ್ಲಾಹನ ಹೆಸರಿನಲ್ಲಿ ಸಮರ್ಪಿಸಲಾದ ದಾನವಾಗಿದೆ. ಯಾರಿಗೂ ಯಾವತ್ತೂ ಕೂಡ ಪರಭಾರೆ ಮಾಡಲಾಗದ, ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗೆ ಮಾತ್ರ ಬಳಸಬಹುದಾದ ಸೊತ್ತುಗಳಾಗಿವೆ. ಅವುಗಳ ನಿರ್ವಹಣೆಗೆ 1913ರಲ್ಲಿ ವಕ್ಫ್ ಕಾಯ್ದೆಯನ್ನು ರೂಪಿಸಲಾಗಿತ್ತು. 1955ರಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ವಕ್ಫ್ ಬೋರ್ಡನ್ನು ಅಂಗೀಕರಿಸಿ, 1995 ಹಾಗೂ 2013ರಲ್ಲಿ ಅಗತ್ಯ ತಿದ್ದುಪಡಿಗಳನ್ನು ತಂದು ವಕ್ಫ್ ಸೊತ್ತುಗಳನ್ನು ಸಂರಕ್ಷಿಸಲು ಪ್ರಯತ್ನಿಸಲಾಗಿತ್ತು ಎಂದು ನಾಸಿರ್ ಲಕ್ಕಿಸ್ಟಾರ್ ಹೇಳಿದರು.
ಭಾರತದ ಸಂವಿಧಾನದಲ್ಲಿ ಆರ್ಟಿಕಲ್ 25, 26, 27, 28ರಲ್ಲಿ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದಿದೆ. ಆರ್ಟಿಕಲ್ 26ರ ಎ, ಬಿ, ಸಿ, ಡಿ ಕಲಮುಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆ ಮಾಡುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ, ಅವುಗಳನ್ನು ಕಾನೂನು ರೀತಿ ನಿರ್ವಹಣೆ ಮಾಡುವ ಹಕ್ಕನ್ನು ನೀಡುತ್ತದೆ. ಅದರಂತೆ ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್ ಸೇರಿದಂತೆ ಎಲ್ಲಾ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುತ್ತಿದ್ದಾರೆ. ಮುಸ್ಲಿಮ್ ಸಮುದಾಯದ ಧಾರ್ಮಿಕ ದಾನಗಳ ಆಚಾರಗಳನ್ನು ಮುನ್ನಡೆಸಲು ವಕ್ಫ್ ಬೋರ್ಡ್ ಕಾಯ್ದೆಯನ್ನು ರೂಪಿಸಲಾಗಿದೆ. ಇದೀಗ ಕೇಂದ್ರದ ಬಿಜೆಪಿ ಸರಕಾರವು ವಕ್ಫ್ ಕಾಯ್ದೆಗೆ ಅಮೂಲಾಗ್ರ ತಿದ್ದುಪಡಿ ಮಾಡಲು ಮುಂದಾಗಿದೆ. ಅದರ ವಿರುದ್ಧದ ಹೋರಾಟದ ಮುಂದಿನ ರೂಪುರೇಷೆಗಳನ್ನು ಖಾಝಿಗಳ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಉಸ್ಮಾನುಲ್ ಫೈಝಿ ತೋಡಾರು, ಯು.ಕೆ.ಮುಹಮ್ಮದ್ ಸಅದಿ ವಳವೂರು, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್, ಅನೀಸ್ ಕೌಸರಿ, ಉಮರ್ ದಾರಿಮಿ ಸಾಲ್ಮರ, ಖಾಸಿಂ ದಾರಿಮಿ ಸವಣೂರು, ಎಂ.ವೈ. ಅಬ್ದುಲ್ ಹಫೀಳ್ ಸಅದಿ ಕೊಡಗು, ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲ್, ರಫೀಕ್ ಹುದವಿ ಕೋಲಾರ, ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹುಸೈನ್ ದಾರಿಮಿ ರೆಂಜಲಾಡಿ, ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು, ಅಬೂ ಸಾಲಿಹ್ ಫೈಝಿ ತುಂಬೆ, ಮುಹಮ್ಮದ್ ಅಲಿ ತುರ್ಕಲಿಕೆ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲ, ಅಶ್ರಫ್ ಕಿನಾರ ಮಂಗಳೂರು ಉಪಸ್ಥಿತರಿದ್ದರು.