ಮಂಗಳೂರು : ಖ್ಯಾತ ನರರೋಗ ತಜ್ಞ ಡಾ. ಕೆ.ಆರ್. ಶೆಟ್ಟಿ ನಿಧನ
ಮಂಗಳೂರು : ಖ್ಯಾತ ನರರೋಗ ತಜ್ಞ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಹಾಗೂ ಡೀನ್ ಡಾ.ಕೊರಂಗ್ರಪಾಡಿ ರಾಧಾಕೃಷ್ಣ ಶೆಟ್ಟಿ (ಡಾ. ಕೆ.ಆರ್. ಶೆಟ್ಟಿ) ಅವರು ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿವಾಸದಲ್ಲಿ ನಿಧನರಾದರು. ಅವರಿಗೆ 87 ವರ್ಷ ಪ್ರಾಯವಾಗಿತ್ತು.
ಡಾ.ಕೆ.ಆರ್.ಶೆಟ್ಟಿ ಕಾಪು ಮೂಲದವರಾಗಿದ್ದು, ಕಾಪುವಿನ ಕೆನರಾ ನರ್ಸರಿಯ ಸಂಸ್ಥಾಪಕ ಮುದ್ದಣ್ಣ ಶೆಟ್ಟಿಯವರ ಪುತ್ರರಾಗಿದ್ದಾರೆ. ಅತ್ಯಂತ ಯಶಸ್ವಿ ನರ ನರರೋಗ ತಜ್ಞರಾಗಿದ್ದ ಅವರು, ಯುವ ಪೀಳಿಗೆಗೆ ದಾರಿ ಮಾಡಿಕೊಡುವ ಉದ್ದೇಶದೊಂದಿಗೆ ತಮ್ಮ ವೃತ್ತಿಜೀವನದಿಂದ ನಿವೃತ್ತರಾಗಿದ್ದರು.
ಮೃದು ಭಾಷಿ, ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದ ಡಾ. ಕೆ.ಆರ್. ಶೆಟ್ಟಿ ಅವರು ಸ್ವಯಂ ನಿವೃತ್ತಿಯ ನಂತರ, ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. UAE ಯ ಅಜ್ಮಾನ್ ನಲ್ಲಿ ಗಲ್ಫ್ ವೈದ್ಯಕೀಯ ಕಾಲೇಜು (ಈಗ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ) ಸ್ಥಾಪಿಸಲು ಮಾರ್ಗದರ್ಶನ ನೀಡಿದ್ದರು.
ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿಯ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪೋಷಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಮೃತ ಡಾ. ಕೆ.ಆರ್. ಶೆಟ್ಟಿ ಅವರು ಪತ್ನಿ ಮತ್ತು ಇಬ್ಬರು ಪುತ್ರರಾದ ಸಂಜಯ್ ಮತ್ತು ಸಜನ್ ಅವರನ್ನು ಅಗಲಿದ್ದಾರೆ.