ಮಂಗಳೂರು: ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸುತ್ತಿದ್ದ ಆರೋಪಿ ಸೆರೆ
ಸಿಸಿಬಿ ಪೊಲೀಸರ ಕಾರ್ಯಾಚರಣೆ
ಮಂಗಳೂರು, ಅ.6: ನಕಲಿ ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಬಿಕರ್ನಕಟ್ಟೆ ಬಜ್ಜೋಡಿಯ ಬರ್ನಾಡ್ ರೋಶನ್ ಮೆಸ್ಕರೆನಸ್ (41) ಬಂಧಿತ ಆರೋಪಿ.
ನಗರದ ಕಂಕನಾಡಿ-ಪಂಪ್ವೆಲ್ ಹಳೆ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ವೊಂದರ ನೆಲ ಅಂತಸ್ತಿನ ಕೊಠಡಿಯಲ್ಲಿ ‘ಹೆಲ್ಪ್ಲೈನ್ ಮಂಗಳೂರು’ ಎಂಬ ಹೆಸರಿನ ಸಂಸ್ಥೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ (ರೇಶನ್ ಕಾರ್ಡ್), ಅಂಕ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿಗಳ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದರು.
ಆರೋಪಿಯಿಂದ ವಿವಿಧ ಹೆಸರಿನಲ್ಲಿ ತಯಾರಿಸಿದ ನಕಲಿ ಆಧಾರ್ ಕಾರ್ಡ್ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಿಗೆ ಪತ್ರ, ನಕಲಿ ಎಸೆಸೆಲ್ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ 3 ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡವರು ಅವುಗಳನ್ನು ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯಿಂದ ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಲ್ಯಾಪ್ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್, ಬಯೋ ಮೆಟ್ರಿಕ್ ಡಿವೈಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಕಲಿ ದಾಖಲೆ ಪತ್ರ ತಯಾರಿಸುವ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.