ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ
ಸಿಸಿಬಿ ಪೊಲೀಸರ ಕಾರ್ಯಾಚರಣೆ
ಮಂಗಳೂರು: ನಗರದ ಸಿಸಿಬಿ ಪೊಲೀಸರು ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಹೊಸವರ್ಷದ ಆಚರಣೆಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 5.11 ಲಕ್ಷ ರೂ. ಮೌಲ್ಯದ ಸೊತ್ತು ಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಉಳ್ಳಾಲದ ರಮೀಝ್ ಯಾನೆ ಲೆಮೇನ್ ಟಿ ರಮೀಝ್ (33) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ದೇರಳಕಟ್ಟೆ ಮೈದಾನದ ಬಳಿ ಎಂಡಿಎಂಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಯು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿ ಮಾಡಿ ತಂದು ಉಳ್ಳಾಲ ಪರಿಸರದಲ್ಲಿ ಹೊಸ ವರ್ಷಾಚರಣೆಯ ಸಂದರ್ಭ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದನು ಎನ್ನಲಾಗಿದೆ. ಆರೋಪಿಯಿಂದ 5 ಲಕ್ಷ ರೂ ಮೌಲ್ಯದ 100 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ, ದರೋಡೆಗೆ ಸಂಚು, ಕೊಲೆಯತ್ನ ಹಾಗೂ ಕೊಣಾಜೆ ಠಾಣೆಯಲ್ಲಿ ದರೋಡೆ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ನೇತೃತ್ವದಲ್ಲಿ ಈ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ. ಸಿಬ್ಬಂದಿಯವರು ಪಾಲ್ಗೊಂಡಿದ್ದರು.