ಮಂಗಳೂರು: ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು, ಎ.11: ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಬೆಂಗಳೂರಿನಿಂದ ಖರೀದಿಸಿ ಸುರತ್ಕಲ್ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರು ಸಮೇತ ಬಂಧಿಸಿ 10 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಮೂಲತಃ ಕಿನ್ಯಾ ಗ್ರಾಮದ ಪ್ರಸಕ್ತ ಕೃಷ್ಣಾಪುರ ನಾಲ್ಕನೇ ಬ್ಲಾಕ್‌ನಲ್ಲಿ ವಾಸವಾಗಿರುವ ಆಸೀಫ್ (24), ಸುರತ್ಕಲ್ ಮುಕ್ಕದ ಅಸ್ಗರ್ ಆಲಿ (31), ಮೂಲತಃ ಕೃಷ್ಣಾಪುರ 6ನೆ ಬ್ಲಾಕ್‌ನ ಪ್ರಸಕ್ತ ಹಳೆಯಂಗಡಿ ಸಾಗ್‌ನಲ್ಲಿ ವಾಸವಾಗಿರುವ ರಶೀಮ್ (24) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಎಂಡಿಎಂಎ ಅನ್ನು ಖಾಸಗಿ ಬಸ್ಸಿನಲ್ಲಿ ಪಾರ್ಸೆಲ್ ಮೂಲಕ ಸಾಗಾಟ ಮಾಡಿಕೊಂಡು ಬಂದು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾರಿನಲ್ಲಿ ಮುಕ್ಕ-ಮಾಲೆಮಾರ್ ಬೀಚ್ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ದಾಳಿ ನಡೆಸಿದರು.
ಆರೋಪಿಗಳಿಂದ 1 ಲಕ್ಷ ರೂ. ಮೌಲ್ಯದ 10 ಗ್ರಾಂ ಎಂಡಿಎಂಎ, 4 ಸಾವಿ ರೂ. ನಗದು, 4 ಮೊಬೈಲ್ ಫೋನ್‌ಗಳು, ಕಾರು ಸಹಿತ 9,24,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಅಸೀಫ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟದ ಹಾಗೂ ಹಲ್ಲೆ ಪ್ರಕರಣ ಸಹಿತ ಎರಡು ಪ್ರಕರಣ ದಾಖಲಾಗಿರುತ್ತದೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್‌ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಎಸ್ಸೈ ಶರಣಪ್ಪಭಂಡಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.