ಮಂಜನಾಡಿ| ಗ್ಯಾಸ್ ಸ್ಫೋಟ ಪ್ರಕರಣ: ಗಂಭೀರ ಗಾಯಗೊಂಡಿದ್ದ ಬಾಲಕಿ ಮೃತ್ಯು
ಮೃತರ ಸಂಖ್ಯೆ 2ಕ್ಕೆ ಏರಿಕೆ
(File photo)
ಉಳ್ಳಾಲ: ಗ್ಯಾಸ್ ಸೋರಿಕೆ ಪರಿಣಾಮ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳ ಪೈಕಿ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ.
ಮೃತ ಬಾಲಕಿಯನ್ನು ಝುಲೈಕಾ ಮೆಅದಿಯಾ ಎಂದು ಗುರುತಿಸಲಾಗಿದೆ.
ಈಕೆ ಮೊಂಟೆಪದವು ಶಾಲೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಆಗಿದ್ದಳು. ಡಿ.8 ರಂದು ಖಂಡಿಕ ನಿವಾಸಿ ಮುತ್ತಲಿಬ್ ಅವರ ಮನೆಯಲ್ಲಿ ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಕೊಠಡಿಯಲ್ಲಿ ಮಲಗಿದ್ದ ಸಂದರ್ಭ ಈ ಘಟನೆ ನಡೆದಿತ್ತು.
ಈ ಸಂದರ್ಭ ತಾಯಿ ಕುಬ್ರಾ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪೈಕಿ ತಾಯಿ ಖುಬ್ರಾ ಡಿ.13ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳ ಪೈಕಿ ಹಿರಿಯ ಮಗಳು ಝುಲೈಕಾ ಗುರುವಾರ ಮೃತಪಟ್ಟಿದ್ದಾಳೆ. ಉಳಿದ ಇಬ್ಬರು ಮಕ್ಕಳಾದ ಮಝಿಯಾ, ಮಾಯಿದಾ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.