ಮಾತಾ ಅಮೃತಾನಂದಮಯಿ ಮಠ. ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ವಿಚಾರ ಸಂಕಿರಣ
ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ದಿನಾಂಕ 4-11-2023 ರಂದು "ಯುವಜನರು ಮತ್ತು ಅಭಿವೃದ್ಧಿ" ಎಂಬ ವಿಚಾರ ಸಂಕಿರಣ ಜರುಗಿತು.
ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಅವರು ಆಶೀರ್ವಚನವಿತ್ತು ಯುವ ಜನತೆ ಭಾರತೀಯ ಸಂಸ್ಕೃತಿಯ ಉನ್ನತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆನೀಡಿದರು.ಬಾಲ್ಯದಲ್ಲೇ ಮೌಲ್ಯಯುತವಾದ ಶಿಕ್ಷಣ ದೊರೆತಾಗ ಮುಂದೆ ದುಶ್ಚಟಗಳ ಕಡೆಗೆ ಆಕರ್ಷಿತರಾಗುವುದಿಲ್ಲ.ಈ ದೃಷ್ಟಿಯಿಂದ ಸಂಸ್ಕಾರಯುತವಾದ ಶಿಕ್ಷಣ ಮಹತ್ವ ಪಡೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ. ದಿನೇಶ್ ಕುಮಾರ್ ರವರು ಮಾದಕ ದ್ರವ್ಯ ವ್ಯಸನ ಮತ್ತು ಪರಿಹಾರದ ಮಾರ್ಗೋಪಾಯಗಳ ಕುರಿತು ವಿದ್ಯಾರ್ಥಿಗಳಿಗೆ ಮಹತ್ವಪೂರ್ಣವಾದ ಮಾಹಿತಿಗಳನ್ನು ತಿಳಿಸಿಕೊಟ್ಟರು.
ಆರಂಭದಲ್ಲಿ ಯಾರೋ ಉಚಿತವಾಗಿ ಕೊಡುವ ನಿಕೊಟಿನ್ ಯುಕ್ತ ಸಿಗರೇಟ್ ನೊಂದಿಗೆ ದುಶ್ಚಟ ಪ್ರಾರಂಭ ಆಗುತ್ತದೆ ನಂತರ ಅದು ಮಾದಕವ್ಯಸನ,ಕಳ್ಳತನ ಹಾಗೂ ಅಪರಾಧ ಪ್ರಕರಣಗಳಿಗೆ ಕಾರಣವಾಗುತ್ತದೆ. ಜಾಮೀನು ರಹಿತ ಪ್ರಕರಣಗಳಾಗಿ ಜೀವನವೇ ನಾಶವಾಗುವ, ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲು ಕಾರಣವಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶ ನೀಡಿದರು.
ಕಾನೂನಿನ ಕಠಿಣ ಅಂಶಗಳ ಬಗ್ಗೆ ಅರಿತುಕೊಂಡು ದ್ರವ್ಯ ಸೇವನೆಗಳಿಂದ ದೂರವಿರುವಂತೆ ಕರೆಯಿತ್ತರು. ಸಮಾಜವನ್ನು ಮಾದಕವ್ಯಸನ ಮುಕ್ತಗೊಳಿಸಲು ಪೊಲೀಸ್ ಇಲಾಖೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಮಾಜವನ್ನು ಜಾಗೃತಗೊಳಿಸಲು
ಶಿಕ್ಷಣ ಸಂಸ್ಥೆಗಳಲ್ಲಿ ಪೊಲೀಸ್ ರೊಂದಿಗೆ ಆಗಾಗ ಇಂತಹ ಸಂವಾದ ಕಾರ್ಯಕ್ರಮ ಆಯೋಜಿಸುವುದು ಅತ್ಯಂತ ಅಗತ್ಯ ಎಂದು ನುಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಅರವಿಂದ ಚೊಕ್ಕಾಡಿಯವರು"ಯುವಜನರು ಮತ್ತು ಭಾರತೀಯ ಸಂಸ್ಕೃತಿಯ ಅಳವಡಿಕೆ" ಕುರಿತು ತನ್ನ ವಿಶಿಷ್ಟವಾದ ಶೈಲಿಯಲ್ಲಿ ವಿವರಿಸಿದರು. ಮಾನಸಿಕ ಸ್ಥಿರತೆ ಇದ್ದಲ್ಲಿ ಅಪರಾಧಕ್ಕೆ ಅವಕಾಶವಿಲ್ಲ. ಸಂಸ್ಕೃತಿ ಅಂದರೆ ಬದುಕುವ ವಿಧಾನ, ನಮ್ಮ ನಡವಳಿಕೆ, ನಮ್ಮ ಭಾಷೆ, ನಮ್ಮ ಯೋಚನೆ ಸರಿಯಾಗಿರಬೇಕು.
ಹಿರಿಯರೊಂದಿಗೆ ಗೌರವಯುತವಾಗಿ, ಕಿರಿಯರೊಂದಿಗೆ ಪ್ರೀತಿಯಿಂದ ಹಾಗೂ ಸಮವಯಸ್ಕರೊಂದಿಗೆ ಸೇಹದಿಂದ ಜೀವನ ಮಾಡುವುದು ಶ್ರೇಯಸ್ಕರ ಎಂದರು.
ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಕೇಂದ್ರದ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಸಲಹೆಗಾರರಾದ ಡಾ.ಜೀವರಾಜ್ ಸೊರಕೆ ಮಠದ ಚಟುವಟಿಕೆಗಳ ಬಗ್ಗೆ ಮಾತಾಡಿದರು. ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಅಕ್ಷತಾ ಶೆಣೈ ಅತಿಥಿಗಳ ಪರಿಚಯ ಮಾಡಿದರು. ಕೇಂದ್ರದ ಸಂಯೋಜಕರಾದ ಶ್ರೀಮತಿ ವೀಣಾ
ಟಿ. ಶೆಟ್ಟಿ ವಂದಿಸಿದರು. ಅಷ್ಟಾವಧಾನಿ ಡಾ.ಬಾಲಕೃಷ್ಣ ಭಾರಧ್ವಾಜ್ ನಿರೂಪಣೆ ಮಾಡಿದರು. ಸಂವಾದ ಕಾರ್ಯಕ್ರಮವನ್ನು ಸದಸ್ಯ ಪ್ರವೀಣ್ ಚಂದ್ರ ಶರ್ಮ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಅಮೃತ ವಿದ್ಯಾಲಯಂ ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ , ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್, ಸೇವಾ ಸಮಿತಿಯ ಉಪಾಧ್ಯಕ್ಷ ಸುರೇಶ್ ಅಮೀನ್, ಪ್ರವೀಣ್ ಶಬರೀಶ್, ಡಾ.ದೇವದಾಸ್ ಪುತ್ರನ್, ಅಯುಧ್ ನ ತನುಷಾ ಶೆಟ್ಟಿ, ಅಮೃತ ವಿದ್ಯಾಲಯಂ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.