ದ.ಕ. ಜಿಲ್ಲೆಯಲ್ಲಿ ಬಾಣಂತಿಯರ ಮರಣ ಪ್ರಮಾಣ ಇಳಿಮುಖ!
ಸಾಂದರ್ಭಿಕ ಚಿತ್ರ (credit: Grok)
ಮಂಗಳೂರು: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ.ಜಿಲ್ಲೆಯಲ್ಲಿ ಬಾಣಂತಿಯರ ಮರಣ ಪ್ರಮಾಣದಲ್ಲಿ ಇಳಿಮುಖ ಕಂಡು ಬಂದಿದೆ. ಸರಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಮರಣ ಸಂಭವಿಸಿರುವುದು ಆರೋಗ್ಯ ಇಲಾಖೆಯ ಅಂಕಿ ಅಂಶದಿಂದ ವ್ಯಕ್ತವಾಗಿದೆ.
2019ರಲ್ಲಿ ದ.ಕ.ಜಿಲ್ಲೆಯಲ್ಲಿ 19 ಬಾಣಂತಿಯರು ಮತ್ತು 354 ಶಿಶುಗಳು ಮೃತಪಟ್ಟಿದ್ದರು. 2024ರವರೆಗಿನ ಅಂಕಿ ಅಂಶದ ಪ್ರಕಾರ 10 ಮಂದಿ ಬಾಣಂತಿಯರು ಹಾಗೂ 300 ಶಿಶುಗಳು ಮೃತಪಟ್ಟಿತ್ತು. ಇದಕ್ಕೆ ತೀವ್ರ ರಕ್ತಸ್ರಾವ, ಗರ್ಭಕೋಶದ ಸಮಸ್ಯೆ, ಅವಧಿಗೂ ಮುನ್ನ ಹುಟ್ಟುವ ಮಗು, ಅನಿರೀಕ್ಷಿತ ಕಾರಣಗಳಿಂದ ಮೃತಪಡುವ ಸಾಧ್ಯತೆಗಳೇ ಹೆಚ್ಚಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದ.ಕ.ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 22 ಬಾಣಂತಿಯರು ಮೃತಪಟ್ಟಿದ್ದಾರೆ. ಇದರಲ್ಲಿ ಮಂಗಳೂರಿನಲ್ಲಿ 9, ಪುತ್ತೂರಿನಲ್ಲಿ 7, ಬಂಟ್ವಾಳದಲ್ಲಿ 4, ಬೆಳ್ತಂಗಡಿಯಲ್ಲಿ 4 ಬಾಣಂತಿಯರು ಸೇರಿದ್ದಾರೆ. ಇದರ ಎಂಡಿಆರ್(ತಾಯಿ ಮರಣ ಪ್ರಮಾಣ) ಶೇ.84.36 ಇತ್ತು. 2021-22ರಲ್ಲಿ ಮೃತಪಟ್ಟ 16 ಬಾಣಂತಿಯರ ಪೈಕಿ ಮಂಗಳೂರಿನಲ್ಲಿ 7, ಪುತ್ತೂರಿನಲ್ಲಿ 4, ಬೆಳ್ತಂಗಡಿಯಲ್ಲಿ 3 ಹಾಗೂ ಬಂಟ್ವಾಳದಲ್ಲಿ 2 ಮಂದಿ ಇದ್ದು, ಎಂಡಿಆರ್ ಪ್ರಮಾಣ ಶೇ.59.6ಕ್ಕೆ ಇಳಿಕೆಯಾಗಿತ್ತು.
2022-23ರಲ್ಲಿ ಮೃತಪಟ್ಟ 14 ಮಂದಿಯ ಪೈಕಿ ಮಂಗಳೂರಿನಲ್ಲಿ 3, ಬಂಟ್ವಾಳದಲ್ಲಿ 5, ಬೆಳ್ತಂಗಡಿಯಲ್ಲಿ 4, ಪುತ್ತೂರಿನಲ್ಲಿ 2 ಹಾಗೂ ಎಂಡಿಆರ್ ಪ್ರಮಾಣ 51.1ಕ್ಕೆ ಇಳಿಕೆಯಾಯಿತು. 2023-24ನೇ ಸಾಲಿನಲ್ಲಿ ಮೃತಪಟ್ಟ 10 ಮಂದಿಯ ಪೈಕಿ ಬಂಟ್ವಾಳ-1, ಬೆಳ್ತಂಗಡಿ-4, ಮಂಗಳೂರು-2, ಪುತ್ತೂರು-3 ದಾಖಲಾಗಿದೆ. ಎಂಡಿಆರ್ ಶೇ.38.7ಕ್ಕೆ ಇಳಿಕೆಯಾಗಿದೆ. 2024-25ನೇ ಸಾಲಿನಲ್ಲಿ ಮೃತಪಟ್ಟ 8 ಮಂದಿಯ ಪೈಕಿ ಬಂಟ್ವಾಳ-1, ಬೆಳ್ತಂಗಡಿ ಹಾಗೂ ಮಂಗಳೂರು ತಲಾ 3, ಸುಳ್ಯದಲ್ಲಿ ಒಬ್ಬರು ಸೇರಿದ್ದಾರೆ. ಎಂಡಿಆರ್ ಶೇ.36.8ರಷ್ಟಿದೆ.
2020-21ನೇ ಸಾಲಿನಲ್ಲಿ ಮೃತಪಟ್ಟ 22 ಮಂದಿಯ ಪೈಕಿ 10 ಮಂದಿ ಖಾಸಗಿ ಆಸ್ಪತ್ರೆ ಮತ್ತು 8 ಮಂದಿ ಸರಕಾರಿ ಆಸ್ಪತ್ರೆ, 3 ಮಂದಿ ಮನೆಯಲ್ಲೇ, ಒಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. 2021-22ರಲ್ಲಿ ಖಾಸಗಿ ಹಾಗೂ ಸರಕಾರಿಯಲ್ಲಿ ತಲಾ ಏಳು ಮಂದಿ ಮತ್ತು ಇಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. 2022-23ನೇ ಸಾಲಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ 8, ಖಾಸಗಿಯಲ್ಲಿ ನಾಲ್ಕು, ಮನೆ ಹಾಗೂ ಸಾಗಿಸುವ ಹಂತದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. 2023-24ನೇ ಸಾಲಿನಲ್ಲಿ ಸರಕಾರಿ-3, ಖಾಸಗಿ 6, ಮನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 2024-25ನೇ ಸಾಲಿನಲ್ಲಿ ಸರಕಾರಿ-1 ಹಾಗೂ ಖಾಸಗಿಯಲ್ಲಿ 4, ಮನೆಯಲ್ಲಿ ಒಬ್ಬರು ಹಾಗೂ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ 2 ಮಂದಿ ಮೃತಪಟ್ಟಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿಯರ ಮರಣ ಪ್ರಮಾಣ ಏರಿಕೆಯಾಗಿದ್ದರೆ, ಸರಕಾರಿ ಆಸ್ಪತ್ರೆಯಲ್ಲಿ ಕಡಿಮೆಯಾಗಿದೆ. ಈ ಪ್ರಮಾಣವನ್ನು ಮತ್ತಷ್ಟು ಇಳಿಸಲು ಇಲಾಖೆಯು ಕ್ರಮಕೈಗೊಳ್ಳುತ್ತಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.