‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಆಯೋಜನೆ ಬಗ್ಗೆ ಸಭೆ
ಮಂಗಳೂರು: ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ‘ಹರ್-ಘರ್ ತಿರಂಗಾ ಮತ್ತು ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಆಯೋಜಿಸುವ ಬಗ್ಗೆ ಸೋಮವಾರ ಮೇಯರ್ ಜಯಾನಂದ ಅಂಚನ್‌ರ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು.
‘ಹರ್-ಘರ್ ತಿರಂಗಾ’ದ ಅಭಿಯಾನದ ಭಾಗವಾಗಿ ಮಂಗಳೂರು ಮಹಾನಗರಪಾಲಿಕೆಗೆ ಹಂಚಿಕೆ ಮಾಡಲಾದ ರಾಷ್ಟ್ರ ಧ್ವಜಗಳನ್ನು ಪಾಲಿಕೆ ಸದಸ್ಯರ ಮೂಲಕ ಮನೆ ಮನೆಗೆ ವಿತರಿಸುವ ಬಗ್ಗೆ ತೀರ್ಮಾನಿಸಲಾಯಿತು. ಅಲ್ಲದೆ ರಾಷ್ಟ್ರ ಧ್ವಜ ಗಳನ್ನು ಪಾಲಿಕೆಯ ಸದಸ್ಯರಿಗೆ ಹಸ್ತಾಂತರಿಸಲಾಯಿತು.
‘ನನ್ನ ಮಣ್ಣು ನನ್ನ ದೇಶ’ ಅಭಿಯಾನದ ಭಾಗವಾಗಿ ಶಿಲಾಫಲಕವನ್ನು ಅಳವಡಿಸಿ ಶಿಲಾಫಲಕದಲ್ಲಿ ಸ್ವಾತಂತ್ರ್ಯಕ್ಕೆ ಮಡಿದ ವೀರಯೋಧರ ಹೆಸರು, ಕೇಂದ್ರ ಸಶಸ್ತ್ರ, ಪೊಲೀಸ್ ರಕ್ಷಣಾ ಪಡೆಗಳ ಸಿಬ್ಬಂದಿ ಮತ್ತು ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ರಾಜ್ಯ ಪೊಲೀಸರ ಹೆಸರುಗಳನ್ನು ಶಿಲಾಫಲಕದಲ್ಲಿ ಸೇರಿಸಲು ನಿರ್ದೇಶಿಸಲಾಗಿರುತ್ತದೆ. ಅಭಿಯಾನದ ಭಾಗ ವಾಗಿ ಕೈಯಲ್ಲಿ ಮಣ್ಣಿನೊಂದಿಗೆ ಪಂಚಪ್ರಾಣ ಪ್ರತಿಜ್ಞೆಯನ್ನು ತೆಗೆದುಕೊಂಡು ಕಳಶದ ಮೂಲಕ ಮಣ್ಣನ್ನು ಸಂಗ್ರಹಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಯಾನಂದ ಅಂಚನ್ ತಿಳಿಸಿದರು.
ಅಭಿಯಾನದ ಭಾಗವಾಗಿ ವಸುಧಾ ವಂದನೆ ಕಾರ್ಯಕ್ರಮದ ಅಂಗವಾಗಿ ಮೇರಿಹಿಲ್ ಬಳಿಯಿರುವ ಉದ್ಯಾನವನ್ನು ‘ಅಮೃತ ವಾಟಿಕಾ’ವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ವೀರಯೋಧರ ಕುಟುಂಬಗಳನ್ನು ಸನ್ಮಾನಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮನಪಾ ಆಯುಕ್ತ ಆನಂದ ಸಿ.ಎಲ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ ನವೀನ್ ಡಿಸೋಜ, ಮತ್ತಿತರರು ಉಪಸ್ಥಿತರಿದ್ದರು.