ಉದ್ಯಮಿಗೆ ಲಕ್ಷಾಂತರ ರೂ. ವಂಚನೆ ಆರೋಪ: ಕಹಳೆ ನ್ಯೂಸ್ ಸಂಪಾದಕ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು
ಪುತ್ತೂರು, ಅ.22: ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿ, ಜೀವ ಬೆದರಿಕೆ ಹಾಕಿರುವ ಆರೋಪದಲ್ಲಿ ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ್ ಭಟ್ ಸಹಿತ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ ನಗರ ಜಿಲ್ಲೆಯ ಬೊಮ್ಮನಹಳ್ಳಿ ತಾಲೂಕಿನ ಹಣಸಿ ಗ್ರಾಮದ ನಿವಾಸಿ ಶಿವಮೂರ್ತಿ, ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ್ ಭಟ್ ಹಾಗೂ ಪುತ್ತೂರು ಕೈಕಾರ ನಿವಾಸಿ ನವೀನ್ ರೈ ಕೈಕಾರ ಎಂಬವರ ವಿರುದ್ಧ ಪುತ್ತೂರು ಬನ್ನೂರು ನಿವಾಸಿ ಉದ್ಯಮಿ ಶೇಖರ್ ಎನ್.ಪಿ. ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ದೂರಿನ ಸಾರಾಂಶ: ಉದ್ಯಮಿ ಶೇಖರ್ ರಿಂದ ಪರಿಚಯಸ್ಥರಾದ ಶಿವಮೂರ್ತಿ ಮರಳು ವ್ಯವಹಾರಕ್ಕಾಗಿ 2022ರ ಫೆಬ್ರವರಿ ತಿಂಗಳಲ್ಲಿ 90 ಲಕ್ಷ ರೂ. ಸಾಲ ಪಡೆದಿದ್ದು, ಒಂದು ವರ್ಷದಲ್ಲಿ ಲಾಭಾಂಶ ಸಹಿತ ಮರುಪಾವತಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಶಿವಮೂರ್ತಿ ಮೂರು ಬಾರಿ ಕ್ರಮವಾಗಿ 25 ಲಕ್ಷ ರೂ., 15 ಲಕ್ಷ ಹಾಗೂ 50 ಲಕ್ಷ ರೂ. ಚೆಕ್ ನೀಡಿದ್ದರೂ ಅದು ಬ್ಯಾಂಕಿನಲ್ಲಿ ತಿರಸ್ಕೃತಗೊಂಡಿತ್ತು. ಬಳಿಕ ಸಾಲದ ಮೊತ್ತವನ್ನು ಹಿಂದಿರುಗಿಸುವಂತೆ ಶೇಖರ್ ಒತ್ತಾಯಿಸಿದಾಗ ನಾಲ್ಕು ಸಲವಾಗಿ 23.50 ಲಕ್ಷ ರೂ. ನೀಡಿದ್ದಾರೆ. ಆದರೆ ಬಾಕಿ ಹಣವನ್ನು ನೀಡದೆ ಸತಾಯಿಸಿದ್ದಲ್ಲದೆ ಶೇಖರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಈ ನಡುವೆ ಶೇಖರ್ ಅವರಿಗೆ ಶಿವಮೂರ್ತಿ ಬಾಕಿಯಿರಿಸಿದ ಹಣದಲ್ಲಿ 20 ಲಕ್ಷ ರೂ.ವನ್ನು ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ್ ಭಟ್ ಹಾಗೂ ನವೀನ್ ರೈ ಕೈಕಾರ ಅವರಲ್ಲಿ ನೀಡಿದ್ದು, ಅವರಿಂದ ಪಡೆದುಕೊಳ್ಳಿ ಎಂದು ಶಿವಮೂರ್ತಿ ಹೇಳಿದ್ದಾರೆ. ಈ ಮಧ್ಯೆ ಮೊಬೈಲ್ ಕರೆ ಮಾಡಿದ ವ್ಯಕ್ತಿಯೋರ್ವ, ನಿನಗೆ ಹಣ ಕೊಡುವುದಿಲ್ಲ' ಎಂದನಲ್ಲದೆ, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಶಿವಮೂರ್ತಿ ತನ್ನಿಂದ ಸಾಲವಾಗಿ ಪಡೆದ ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಲಾಗಿದೆ. ಆದ್ದರಿಂದ ಈ ಮೂವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.