ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ | ಶಾಸಕ ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಅವಹೇಳನಗೈದು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಶಾಸಕ ಭರತ್ ಶೆಟ್ಟಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಪಂಜಿಮೊಗರಿನ ಉರುಂದಾಡಿಗುಡ್ಡಯ ಅನಿಲ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಶಾಸಕ ಭರತ್ ಶೆಟ್ಟಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜು.8ರಂದು ಕಾವೂರು ಜಂಕ್ಷನ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭರತ್ ಶೆಟ್ಟಿ, ʼಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಪಾರ್ಲಿಮೆಂಟ್‌ನಿಂದ ದೂಡಿ ಹೊರಗೆ ಹಾಕಬೇಕು. ರಾಹುಲ್ ಗಾಂಧಿಯ ಕೆನ್ನೆಗೆ ಎರಡು ಬಡಿಯಬೇಕು ಎಂದು ಅನಿಸುತ್ತದೆ. ಅವಾಗ ಮಾತ್ರ ರಾಹುಲ್ ಗಾಂಧಿಗೆ ಬುದ್ಧಿ ಬರುತ್ತದೆʼ ಎಂದು ಹೇಳುವ ಮೂಲಕ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅಲ್ಲೇ ಇದ್ದ ಶಾಸಕ ವೇದವ್ಯಾಸ ಕಾಮತ್, ಸಂಸದ ಬ್ರಿಜೇಶ್ ಚೌಟ ಮತ್ತಿತರರು ಕೂಡ ಪ್ರಚೋದಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅನಿಲ್ ಒತ್ತಾಯಿಸಿದ್ದರು. ಅದರಂತೆ ಇದೀಗ ಕಾವೂರು ಠಾಣೆಯಲ್ಲಿ ಶಾಸಕ ಭರತ್ ಶೆಟ್ಟಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಐವನ್ ಡಿಸೋಜ ಮತ್ತಿತರರು ಶಾಸಕ ಭರತ್ ಶೆಟ್ಟಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದನ್ನು ಸ್ಮರಿಸಬಹುದಾಗಿದೆ.