ಮೂಡುಬಿದಿರೆ: ಬಸ್‌ನಿಂದ ಬಿದ್ದು ಮಹಿಳೆ ಮೃತ್ಯು; ಚಾಲಕ - ನಿರ್ವಾಹಕ ವಶಕ್ಕೆ
ಮಂಗಳೂರು, ಸೆ.12: ಮಹಿಳೆಯೊಬ್ಬಳು ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಮೂಡುಬಿದಿರೆಯ ಮಾರೂರು ಗ್ರಾಮದ ಕುಂಟೋಡಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರೂರು ಗ್ರಾಮದ ನೀಲಮ್ಮ ಎಂಬವರು ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟ ಮೃತಪಟ್ಟ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ನೀಲಮ್ಮ ತನ್ನ ಮೊಮ್ಮಗ ತೇಜಸ್ ಅವರೊಂದಿಗೆ ಮನೆಯಿಂದ ಮೂಡುಬಿದಿರೆ ಆಸ್ಪತ್ರೆಗೆ ಹೊರಟಿದ್ದರು. ಸಾಯಿ ಟ್ರಾವೆಲ್ಸ್ ಖಾಸಗಿ ಬಸ್‌ನಲ್ಲಿ ತೇಜಸ್ ಹಿಂದಿನ ಬಾಗಿಲಿನಿಂದ ಬಸ್ ಹತ್ತಿದ್ದರು ಎನ್ನಲಾಗಿದೆ. ನೀಲಮ್ಮ ಮುಂದಿನ ಬಾಗಿಲಿನಿಂದ ಬಸ್ ಹತ್ತುತ್ತಿದ್ದಂತೆ ಬಸ್‌ನ ನಿರ್ವಾಹಕ ಅಶೋಕ ಎಂಬಾತ ಬಸ್ಸು ಚಲಾಯಿಸಲು ವಿಶಿಲ್ ಊದುತ್ತಿದ್ದಂತೆ ಬಸ್ಸಿನ ಚಾಲಕ ಪ್ರಸನ್ನ ಎಂಬಾತನು ಒಮ್ಮೆಲೆ ಬಸ್ಸನ್ನು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮವಾಗಿ ನೀಲಮ್ಮರವರು ನಿಯಂತ್ರಣ ತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದು ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಈ ಸಂಬಂಧ ತೇಜಸ್ ನೀಡಿರುವ ದೂರಿನಂತೆ ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಾಲಕ - ನಿರ್ವಾಹಕನ ವಶಕ್ಕೆ: ಮಹಿಳೆ ನೀಲಮ್ಮ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಬಸ್ ಚಾಲಕ ಪ್ರಸನ್ನ ಮತ್ತು ನಿರ್ವಾಹಕ ಅಶೋಕ್ ಎಂಬವರನ್ನು ವಶಕ್ಕೆ ಪಡೆದು ಸೂಕ್ತ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಬಸ್ಸನ್ನು ವಶಕ್ಕೆ ಪಡೆದಿದ್ದು ಆರ್.ಟಿ.ಓ ಪರಿಶೀಲನೆಗಾಗಿ ವರದಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಬಿಟ್ಟುಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.