ಮೂಡುಬಿದಿರೆ: ಚಲನಚಿತ್ರ ಮಂದಿರಕ್ಕೆ ಹಾನಿ; ಸೊತ್ತು ಕಳವು
ಮಂಗಳೂರು: ಮೂಡಬಿದ್ರೆಯ ಅಮರಶ್ರಿ ಚಲನಚಿತ್ರ ಮಂದಿರಕ್ಕೆ ತಂಡವೊಂದು ನುಗ್ಗಿ ಹಾನಿಗೈದಿರುವ ಬಗ್ಗೆ ಮೂಡುಬದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ.ಕ. ಜಿಲ್ಲಾಧಿಕಾರಿಯ ಆದೇಶದಂತೆ 2023ರ ಆಗಸ್ಟ್ 4ರಿಂದ ಈ ಚಲನಚಿತ್ರ ಮಂದಿರುವು ಸರಕಾರದ ವಶದಲ್ಲಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಈ ಹಿಂದೆ ಚಲನಚಿತ್ರ ಮಂದಿರವನ್ನು ಮ್ಯಾನೇಜ್ ಮಾಡುತ್ತಿದ್ದ ಜೆರಾಲ್ಡ್ ಕುಟಿನ್ಹಾ ಮತ್ತಾತನ ಸಹಚರರಾದ ರಾಘವೇಂದ್ರ, ನಿತ್ಯಾನಂದ ಮತ್ತಿತರರು ದ್ವೇಷ ಸಾಧಿಸುವ ದುರುದ್ದೇಶದಿಂದ ಚಲನ ಚಿತ್ರ ಮಂದಿರದ ಕಾಂಪೌಂಡಿನ ಗೇಟಿನ ಲಾಕ್ ಹಾಗೂ ಚಲನ ಚಿತ್ರ ಮಂದಿರದ ಬಲ ಮತ್ತು ಎಡ ಬದಿಯ ಎರಡೂ ಬಾಗಿಲಿನ ಚಿಲಕವನ್ನು ಮುರಿದು ಅಕ್ರಮವಾಗಿ ಒಳಗೆ ಪ್ರವೇಶಿಸಿದ್ದಾರೆ. ಚಿತ್ರಮಂದಿರದ ಪರದೆಯನ್ನು ಹರಿದು ಹಾಕಿ ಒಳಗಿನ ವಿದ್ಯುತ್ ದೀಪಗಳನ್ನು ಹುಡಿ ಮಾಡಿ, ವಿದ್ಯುತ್ ತಂತಿ ಮತ್ತು ಕೇಬಲ್ ಗಳನ್ನು ತುಂಡರಿಸಿದ್ದಾರೆ. ಪ್ರಾಜೆಕ್ಟ್ ಕೋಣೆಯಲ್ಲಿದ್ದ ತಾಂತ್ರಿಕ ಸಾಧನಗಳಾದ ಸಿನಿ ಲಿಸ್ಟರ್, ಪ್ರಜೆಕ್ಟರ್, ಕಂಪ್ಯೂಟರ್, ಲ್ಯಾಪ್ಟಾಪ್ ಇತ್ಯಾದಿ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.