ಮುಮ್ತಾಝ್ ಅಲಿ ಪ್ರಕರಣ: ಪ್ರಮುಖ ಆರೋಪಿಗಳ ಬಂಧನ
ಸತ್ತಾರ್, ಮುಸ್ತಫಾ, ಶಾಫಿ ನಂದಾವರ
ಕಾವೂರು: ಉದ್ಯಮಿ ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಸೂತ್ರದಾರ ಹಾಗೂ ಎ2 ಆರೋಪಿ ಕೃಷ್ಣಾಪುರ ನಿವಾಸಿ ಅಬ್ದುಲ್ ಸತ್ತಾರ್, ಎ3 ಆರೋಪಿ ಮುಹಮ್ಮದ್ ಮುಸ್ತಫಾ, ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಶಾಫಿ ಎಂಬವರನ್ನು ಅ.9ರಂದು ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಪತ್ತೆ ಹಚ್ಚಿ ಕಾವೂರು ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಪ್ರಕರಣದಲ್ಲಿ ಎ1 ಆರೋಪಿ ರೆಹಮತ್ ಮತ್ತು 5ನೇ ಆರೋಪಿ ಆಕೆಯ ಪತಿ ಶುಐಬ್ ಅವರನ್ನು ಅ.8ರಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಇಬ್ಬರಿಗೆ ನ್ಯಾಯಾಲಯವು ಗುರುವಾರದ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅ.6ರಂದು ಮುಮ್ತಾಝ್ ಅಲಿ ಅವರ ಸಹೋದರ ಹೈದರಾಲಿ ಅವರು ಪ್ರಮುಖ ಆರೋಪಿ ರೆಹಮತ್ ಸೇರಿ 6 ಮಂದಿಯ ವಿರುದ್ಧ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 308(2), 308(5),352, 351(2), 190, 108 ಬಿ.ಎನ್.ಎಸ್ 2023 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.