ಮುಮ್ತಾಝ್ ಅಲಿ ಪ್ರಕರಣ: ಹನಿಟ್ರ್ಯಾಪ್, ಬ್ಲಾಕ್ ಮೇಲ್ ಬಗ್ಗೆ ಆಳವಾದ ತನಿಖೆಗೆ ಹೋರಾಟ ಸಮಿತಿ ಆಗ್ರಹ
ಮುಮ್ತಾಝ್ ಅಲಿ
ಮಂಗಳೂರು: ಖ್ಯಾತ ಉದ್ಯಮಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮುಮ್ತಾಝ್ ಅಲಿ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಸುರತ್ಕಲ್ನ ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ.
ಮುಮ್ತಾಝ್ ಅಲಿ ಸಾವಿನ ಪ್ರಕರಣ ಸಮಾಜದಲ್ಲಿ ತಲ್ಲಣ ಮೂಡಿಸಿದೆ. ಹನಿಟ್ರ್ಯಾಪ್, ಬ್ಲಾಕ್ ಮೇಲ್ ನಿಂದ ಕಂಗೆಟ್ಟು ಘಟನೆ ಸಂಭವಿಸಿದ್ದು, ಪ್ರಕರಣದಲ್ಲಿ ಇನ್ನಷ್ಟು ನಿಗೂಢ ಅಂಶಗಳು, ಭಾಗೀದಾರಿಕೆಯ ಶಂಕೆ ಇದೆ. ಈ ಪ್ರಕರಣ ಮಾತ್ರ ವಲ್ಲದೆ ಇನ್ನಷ್ಟು ಹನಿಟ್ರ್ಯಾಪ್, ಬ್ಲಾಕ್ ಮೇಲ್ ಪ್ರಕರಣಗಳು ಮಂಗಳೂರಿನ ಪ್ರತಿಷ್ಠಿತರು, ಉದ್ಯಮಿಗಳನ್ನು ಗುರಿಯಾಗಿಸಿ ನಡೆದಿರುವ ಸುದ್ದಿಗಳು ಹರಿದಾಡುತ್ತಿವೆ. ಸದ್ದಿಲ್ಲದೆ ಮುಗಿದು ಹೋಗಿರುವ ಇಂತಹ ಪ್ರಕರಣಗಳಲ್ಲಿ ಹಲವು ಕುಟುಂಬಗಳು ಛಿದ್ರವಾಗಿವೆ ಎಂಬ ಮಾತುಗಳಿವೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮುಮ್ತಾಝ್ ಅಲಿ ಪ್ರಕರಣವನ್ನು ಆಳವಾದ ತನಿಖೆಗೆ ಒಳಪಡಿಸಬೇಕಾಗಿದೆ ಎಂದು ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಮಹಿಳೆಯನ್ನು ಬಳಸಿಕೊಂಡು ಹಣ ಹಾಗೂ ವೈಯುಕ್ತಿಕ ದ್ವೇಷ ಸಾಧನೆ ಸಹಿತ ವಿವಿಧ ಉದ್ದೇಶ ಸಾಧನೆಗಾಗಿ ಮುಮ್ತಾಝ್ ಅಲಿಯನ್ನು ಹಾಗೂ ಕುಟುಂಬವನ್ನು ಗುರಿಯಾಗಿಸಿ ಪರಿಚಿತ ತಂಡ ಬ್ಲಾಕ್ ಮೇಲ್ಗೆ ಒಳಪಡಿಸಿದೆ ಹಾಗು ಅಸಾಧ್ಯ ಕಿರುಕಳ ನೀಡಿದೆ, ಇದರಿಂದ ಉಂಟಾದ ಒತ್ತಡವನ್ನು ಭರಿಸಲಾಗದೆ ಮಮ್ತಾಝ್ ಅಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಬೆದರಿಕೆ, ಮಾನಸಿಕ ಕಿರುಕುಳ, ಪ್ರತಿಷ್ಠೆಗೆ ಕಳಂಕ ಹಚ್ಚುವ ಯತ್ನ, ಬ್ಲಾಕ್ ಮೇಲ್, ಸತತವಾಗಿ ಹಣ ಸುಲಿಗೆ ಹೀಗೆ ಹಲವು ತಿಂಗಳುಗಳಷ್ಟು ದೀರ್ಘ ಕಾಲದ ವ್ಯಾಪ್ತಿಯನ್ನು ಈ ಪ್ರಕರಣ ಹೊಂದಿದೆ. ಕುಟುಂಬ ದೂರು ದಾಖಲಿಸಿದ ಆರು ಜನರಲ್ಲದೆ ಇನ್ನೂ ಹಲವರು ಈ ಕೃತ್ಯದಲ್ಲಿ ಕೈಯ್ಯಾಡಿಸಿರುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಇದೆ. ಮುಮ್ತಾಝ್ ಅಲಿ ಮುಸ್ಲಿಂ ಸಾಮಾಜಿಕ ರಂಗದಲ್ಲಿ ಮಾತ್ರವಲ್ಲದೆ ಧಾರ್ಮಿಕ ವಲಯದಲ್ಲಿಯೂ ಪ್ರಭಾವಶಾಲಿ ವ್ಯಕ್ತಿತ್ವವಾಗಿ ಗುರುತಿಸಿ ಕೊಂಡಿದ್ದರು. ಅಲಿ ಕುಟುಂಬ ರಾಜಕೀಯವಾಗಿಯು, ಉದ್ಯಮ ವಲಯಲದಲ್ಲಿಯೂ ಪ್ರತಿಷ್ಠಿತ ಸ್ಥಾನಮಾನ ಹೊಂದಿದೆ. ಈ ಎಲ್ಲಾ ಅಂಶಗಳು, ಆರೋಪಿತರಲ್ಲಿ ಕೆಲವರ ಹಿನ್ನಲೆಗಳು ಇದು ಸಾಮಾನ್ಯ ಒಂದು ಹನಿಟ್ರ್ಯಾಪ್ ಅಲ್ಲ ಎಂಬ ಸಾರ್ವಜನಿಕ ವಲಯದ ಅನುಮಾನಗಳನ್ನು ಪುಷ್ಟಿಗೊಳಿಸುವಂತಿದೆ. ಮುಮ್ತಾಝ್ ಅಲಿಯನ್ನು ಹಣಕಾಸಿನ ಬ್ಲಾಕ್ ಮೇಲ್ ಗೆ ಒಳಪಡಿಸಿದ ಸಂದರ್ಭ ದೊಡ್ಡ ಮೊತ್ತ ಪಾವತಿಯಾಗಿರುವ ಕುರಿತು ಕುಟಂಬವೇ ದೂರಿನಲ್ಲಿ ಒಪ್ಪಿಕೊಂಡಿದ್ದು, ಹಣ ಪಾವತಿಯ ತರುವಾಯವೂ ಬ್ಲಾಕ್ ಮೇಲ್ ಮುಂದುವರಿದಿದ್ದು, ಆಪ್ತ ಮಾತುಕತೆಗಳ ಆಡಿಯೋಗಳು ಆಯ್ದ ಕೆಲವು ಪ್ರತಿಷ್ಠಿತರಿಗೆ ತಲುಪಿರವುದು ಪ್ರಕರಣ ಮೇಲ್ಕಂಡಷ್ಟು ಸರಳ ಅಲ್ಲ, ಹಣದ ಸುಲಿಗೆ ಮಾತ್ರ ಇವರ ಉದ್ದೇಶ ಆಗಿರಲಿಲ್ಲ ಎಂಬಂತೆ ಗೋಚರಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರಕರಣದ ತನಿಖೆಯನ್ನು ವಿಶೇಷವಾಗಿ ಪರಿಗಣಿಸಬೇಕು, ಒತ್ತಡಗಳಿಗೆ ಮಣಿಯದ ದಕ್ಷ ಅಧಿಕಾರಿಗಳಿಗೆ ತನಿಖೆಯ ಹೊಣೆಗಾರಿಕೆ ನೀಡಬೇಕು ಎಂದು ಹೋರಾಟ ಸಮಿತಿ ಹೇಳಿದೆ.
ಹನಿಟ್ರ್ಯಾಪ್ ಪ್ರಕರಣಗಳು ಮಂಗಳೂರಿನಲ್ಲಿ ಸಾಮಾನ್ಯವಾಗುತ್ತಿದೆ. ಹಲವಾರು ಉದ್ಯಮಿಗಳು, ಪ್ರತಿಷ್ಠಿತರು ಇದರ ಬಲಿಪಶುಗಳಾಗಿದ್ದಾರೆ, ಲಕ್ಷ, ಕೋಟಿ ರೂ.ಗಳ ಲೆಕ್ಕದಲ್ಲಿ ಹಣ ಪಾವತಿಸಿ ಸೆಟ್ಲ್ಮೆಂಟ್ ಮಾಡಿಕೊಂಡಿದ್ದಾರೆ. ಪೊಲೀಸ್ ದೂರುಗಳು ದಾಖಲಾಗದೆ ಪ್ರಕರಣಗಳು ಮುಚ್ಚಿ ಹೋಗಿವೆ, ಇದರಿಂದ ಹಲವು ಕುಟುಂಬಗಳು ನೆಮ್ಮದಿ ಕಳೆದುಕೊಂಡು ಛಿದ್ರವಾಗಿವೆ ಎಂಬ ಮಾತುಗಳು ವರ್ಷಗಳಿಂದ ಚರ್ಚೆಯಲ್ಲಿವೆ. ವೈಟ್ ಕಾಲರ್ ಸೋಗಿನ, ರಾಜಕೀಯ ಒಡನಾಟದ ಕೆಲವರು ಇಂತಹ ಪ್ರಕರಣಗಳ ಸೂತ್ರಧಾರರು ಎಂದು ಆರೋಪಗಳಿವೆ. ಮುಮ್ತಾಝ್ ಅಲಿ ಪ್ರಕರಣ ಸಮಾಜದಲ್ಲಿ ಉಂಟು ಮಾಡಿರುವ ತಲ್ಲಣಗಳನ್ನು ಗಮನಿಸಿಯಾದರು ಇಂತಹ ಜಾಲಗಳನ್ನು ಮಟ್ಟ ಹಾಕಲು ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ ಎಂದು ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.