ಕೊಟ್ಟಾರ ಚೌಕಿ ಸರ್ಕಲ್ ಗೆ ಕ್ಯಾಪ್ಟನ್ ಪ್ರಾಂಜಲ್ ಹೆಸರು: ಶಾಸಕ ಭರತ್ ಶೆಟ್ಟಿ
ಕ್ಯಾಪ್ಟನ್ ಪ್ರಾಂಜಲ್
ಸುರತ್ಕಲ್: ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್ ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.
ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ. ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್ ಹೆಸರಿಡುವುದು ಸೂಕ್ತವಾಗಿದೆ. ಈ ಬಗ್ಗೆ ಮಂಗಳೂರು ಪಾಲಿಕೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಸೂಚನೆ ನೀಡಲಾಗುದು ಎಂದು ತಿಳಿಸಿದ್ದಾರೆ.
ಉತ್ತಮ ಜೀವನಕ್ಕಾಗಿ ಲಕ್ಷಾಂತರ ರೂ. ವೇತನ ಬರುವ ಬೇರೆ ಉದ್ಯೋಗವನ್ನು ಆರಿಸುವ ಬದಲು ಬಾಲ್ಯದಿಂದಲೇ ಸೇನೆಗೆ ಸೇರಿ ದೇಶ ಸೇವೆ ಮಾಡುವ ಕ್ಯಾಪ್ಟನ್ ಪ್ರಾಂಜಲ್ ಅವರ ನಿರ್ಧಾರ, ಅವರ ಸಾಹಸಗಾಥೆ ಯುವಶಕ್ತಿಗೆ ಪ್ರೇರಣೆಯಾಗಿದೆ. ಅವರ ಕುಟುಂಬಕ್ಕೆ ಅನಿರೀಕ್ಷಿತ ಆಘಾತವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಶಾಸಕ ಭರತ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.