ಹದಗೆಟ್ಟ ನಂತೂರು, ಕೆಪಿಟಿ ಜಂಕ್ಷನ್ ರಾ.ಹೆ ರಸ್ತೆಗಳು: ದ.ಕ. ಜಿಲ್ಲಾಧಿಕಾರಿ ಪರಿಶೀಲನೆ, ತುರ್ತು ಕ್ರಮಕ್ಕೆ ನಿರ್ದೇಶನ
ಮಂಗಳೂರು, ಜು. 16: ನಗರದ ಪ್ರಮುಖ ಜಂಕ್ಷನ್ಗಳಾದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೊಳಪಡುವ ಕೆಪಿಟಿ ಹಾಗೂ ನಂತೂರು ಜಂಕ್ಷನ್ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ವಾಹನದಟ್ಟನೆಯಿಂದ ಕೂಡಿರುವ ಈ ಜಂಕ್ಷನ್ ಗಳಲ್ಲಿ ಬೃಹತ್ ಗಾತ್ರದ ಹೊಂಡಗುಂಡಿಗಳಿಂದಾಗಿ ವಾಹನಗಳು ಸಂಚಾರಕ್ಕೆ ತೊಂದರೆ ಪಡುವ, ದ್ವಿಚಕ್ರ ಸವಾರರು ಅತ್ಯಂತ ಅಪಾಯಕಾರಿಯಾಗಿ ಈ ರಸ್ತೆಗಳಲ್ಲಿ ಸಂಚರಿಸಬೇಕಾದ ಪರಿಸ್ಥಿಯನ್ನು ಗಮನಿಸಿದ ಜಿಲ್ಲಾಧಿಕಾರಿ ತುರ್ತು ದುರಸ್ತಿ ಕಾಮಗಾರಿಯನ್ನು ಕೈಗೊಂಡು ರಸ್ತೆಯನ್ನು ವಾಹನ ಸಂಚಾರ ಯೋಗ್ಯವನ್ನಾಗಿಸಲು ಸೂಚಿಸಿದರು.
ನಂತೂರು ಜಂಕ್ಷನ್ ರಸ್ತೆಯಲ್ಲಿ ಪೇವರ್ ಫಿನಿಶ್ ನೊಂದಿಗೆ ಗುಂಡಿಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ಕೆಪಿಟಿ ಜಂಕ್ಷನ್ ಸುತ್ತಮುತ್ತಲಿನ ರಸ್ತೆಯನ್ನು ಎರಡು ದಿನಗಳಿಗೊಮ್ಮೆ ತಾತ್ಕಾಲಿಕ ವ್ಯವಸ್ಥೆಯ ಮೂಲಕ ಸಂಚಾರ ಯೋಗ್ಯವನ್ನಾಗಿಸುವಂತೆ ಸಲಹೆ ನೀಡಿದರು.
ಸುರತ್ಕಲ್ ರಸ್ತೆ ಹಾಗೂ ನಗರದ ಕೆಲವೊಂದು ಹೆದ್ದಾರಿ ಇಕ್ಕೆಲಗಳಲ್ಲಿನ ಕೆಲವೊಂದು ಸರ್ವಿಸ್ ರಸ್ತೆಗಳಲ್ಲಿ ಮಳೆ ನೀರು ಹರಿಹೋಗದೆ ಸಮಸ್ಯೆಯಾಗುತ್ತಿರುವಲ್ಲಿಯೂ ಕ್ರಮ ವಹಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಪಂಪ್ವೆಲ್ ಹಾಗೂ ಇತರ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಸಂಚಾರ ಯೋಗ್ಯವಾಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೆಪಿಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ನಿರ್ಮಿಸಲುದ್ದೇಶಿಸಲಾಗಿರುವ ಮೇಲ್ಸೇತುವೆ ಕಾಮಗಾರಿಗೆ ಡಿಪಿಆರ್ ಸಿದ್ಧವಾಗಿದ್ದು, ಕೆಲ ದಿನಗಳಲ್ಲೇ ಕಾಮಗಾರಿ ಆರಂಭಿಸಲಿದ್ದಾರೆ. ಹಾಗಾಗಿ ಸದ್ಯ ರಸ್ತೆಯ ಗುಂಡಿ ಹೊಂಡಗಳನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಆನಂದ್ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಆಝ್ಮಿ, ಪಾಲಿಕೆಯ ಉಪ ಆಯುಕ್ತ ಗಿರೀಶ್ ನಂದನ್, ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಶೆಣೈ, ಮಂಗಳೂರು ಸಂಚಾರ ವಿಭಾಗದ ಎಸಿಪಿ ನಝ್ಮಾ ಫಾರೂಕಿ ಮೊದಲಾದವರು ಉಪಸ್ಥಿತರಿದ್ದರು.
‘ಜಿಲ್ಲಾಧಿಕಾರಿ ನಿರ್ದೇಶನದಂತೆ ನಂತೂರು ಜಂಕ್ಷನ್ ಭಾಗದಲ್ಲಿ ಇಂದು ರಾತ್ರಿಯಿಂದಲೇ ಸಂಚಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಪೇವರ್ ಫಿನಿಶ್ ಮೂಲಕ ಸುಗಮ ವಾಹನ ಸಂಚಾರಕ್ಕೆ ಯೋಗ್ಯವಾಗುವ ರೀತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಬೇಕು. ಕೆಪಿಟಿ ಜಂಕ್ಷನ್ನಲ್ಲಿ ಮೇಲ್ಭಾಗದಿಂದ ನೀರು ಹರಿದು ಜಂಕ್ಷನ್ನ ಮಧ್ಯ ಸೇರುವುದರಿಂದ ಸದ್ಯ ಇಲ್ಲಿ ತಾತ್ಕಾಲಿಕ ದುರಸ್ತಿಯನ್ನು ನಡೆಸಲಾಗುವುದು.ಐ
ಆನಂದ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.