ಜಿಲ್ಲಾ ಕಾರಾಗೃಹದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಮಂಗಳೂರು, ಅ.29: ರಾಷ್ಟ್ರೀಯ ಆಯುರ್ವೇದ ದಿನದ ನೆನಪಿಗಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಶ್ರೀವೇದಮಾಯು ಆಯುರ್ವೇದಿಕ್ ಆಸ್ಪತ್ರೆ ಮತ್ತು ಕಣಚೂರು ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಮಂಗಳೂರು ಜಿಲ್ಲಾ ಕಾರಾಗೃಹದ 425 ಜೈಲು ಕೈದಿಗಳು ಮತ್ತು ಸಿಬ್ಬಂದಿಗಾಗಿ ಒಂದು ದಿನದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಮಂಗಳವಾರ ಆಯೋಜಿಸಿತು.
ಈ ವೈದ್ಯಕೀಯ ಶಿಬಿರದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ, ಚರ್ಮರೋಗ, ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಪತ್ತೆ ಪರೀಕ್ಷೆಗಳು ನಡೆದವು. ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪ, ಜೈಲು ಅಧಿಕಾರಿಗಳು ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ. ಎಡ್ಮಂಡ್ ಫ್ರಾಂಕ್ ನೇತೃತ್ವದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ವೈದ್ಯಕೀಯ ಶಿಬಿರವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ಆಯೋಜಿಸಿದ ‘ಆಯುರ್ವೇದ ಔಷಧ ಮತ್ತು ರೋಗ ತಡೆಗಟ್ಟುವಿಕೆ’ ಎಂಬ ವಿಷಯದ 5 ತಿಂಗಳ ಡಿಪ್ಲೊಮಾ ಕೋರ್ಸಿನ ಭಾಗವಾಗಿ ಆಯೋಜಿಸಲಾಗಿತ್ತು. ಈ ಕೋರ್ಸು ಜೈಲು ಕೈದಿಗಳ ಮನಸ್ಸು ಮತ್ತು ಜೀವನದಲ್ಲಿ ಪರಿವರ್ತನೆ ತರಲು ಹಾಗೂ ಗೌರವಯುತವಾದ ಜೀವನವನ್ನು ನಡೆಸಲು ಸಹಕಾರಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ.