ಮೂಲೆಗುಂಪಾದ ಉಳ್ಳಾಲ ಸೇತುವೆಯ ರಾಷ್ಟ್ರ ಲಾಂಛನ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಲಾದ ಹಳೆ ಸೇತುವೆಗೆ ಅಳವಡಿಸಿರುವ ರಾಷ್ಟ್ರ ಲಾಂಛನ ನಿರ್ಲಕ್ಷ್ಯಕ್ಕೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ರಾಷ್ಟ್ರ ಲಾಂಛನ ಸ್ತಂಭ ಗಿಡಗಂಟಿಗಳಿಂದ ಆವೃತ್ತವಾಗಿದ್ದು, ಸೇತುವೆಯ ಮೂಲಕ ಹಾದುಹೋಗುವ ವಾಹನಿಗರಿಗೆ ಇದು ಕಾಣದಂತಾಗಿದೆ.
1960ರಲ್ಲಿ ಆಗಿನ ರಾಷ್ಟ್ರೀಯ ಹೆದ್ದಾರಿ 17 (ಈಗ ರಾ.ಹೆ.66)ರಲ್ಲಿನ ಸೇತುವೆಯ ತುದಿಯಲ್ಲಿ ಡಂಕರ್ಲಿ ಕಂಪೆನಿಯು ಕಾಂಕ್ರಿಟ್ ಕಂಬದಲ್ಲಿ ರಾಷ್ಟ್ರ ಲಾಂಛನವನ್ನು ಅಳವಡಿಸಿದೆ. ಕ್ರಿ.ಪೂ. 250ರ ವೇಳೆಗೆ ಚಕ್ರವರ್ತಿ ಅಶೋಕ ನಿರ್ಮಿಸಿದ್ದ ಸ್ತಂಭಕ್ಕೆ ಬೆನ್ನು ತಾಗಿಸಿಕೊಂಡು ಕುಳಿತುಕೊಂಡ ನಾಲ್ಕು ಸಿಂಹವನ್ನು 1950ರಲ್ಲಿ ಕೇಂದ್ರ ಸರಕಾರವು ರಾಷ್ಟ್ರ ಲಾಂಛವನನ್ನಾಗಿ ಸ್ವೀಕರಿಸಿತ್ತು. ಆ ಬಳಿಕ ಹಲವೆಡೆ ಇದನ್ನು ಅಳವಡಿಸಲಾಗಿದೆ. ಅದರಂತೆ 1960ರಲ್ಲಿ ಉಳ್ಳಾಲದ ನೇತ್ರಾವತಿ ಸೇತುವೆಗೆ ಅಳವಡಿಸಲಾಯಿತು.
ಆರಂಭದಲ್ಲಿ ಇದು ವಾಹನಿಗರ ಕಣ್ಸೆಳೆಯುತ್ತಿತ್ತು. ಬಳಿಕ ಸುತ್ತಮುತ್ತ ಗಿಡಗಂಟಿ ಬೆಳೆದ ಕಾರಣ ರಾಷ್ಟ್ರಲಾಂಛನವು ಇದ್ದೂ ಇಲ್ಲದಂತಾಗಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕಿದೆ.